Lಹಾಸನ ಸಿಟಿ ಟ್ರಾಫಿಕ್ ಪೊಲೀಸ್ ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಶಾಸಕ ಪ್ರೀತಂ ಗೌಡ ಅವರು ಆಟೋ ಚಾಲಕರಿಗೆ ಕ್ಯೂ ಅರ್ ಕೋಡ್ ವಿತರಿಸಿದರು.
ಹಾಸನ: ಆಟೋ ಚಾಲಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಿರುವ ಹಾಸನ ಸಿಟಿ ಟ್ರಾಫಿಕ್ ಪೊಲೀಸ್ (ಎಚ್‌ಸಿಟಿಪಿ) ಆ್ಯಪ್ ಅನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಪ್ರಯೋಜನ ಪಡೆಯಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದ ಎನ್.ಆರ್. ವೃತ್ತದಲ್ಲಿ ಶುಕ್ರವಾರ ಹಾಸನ ಸಂಚಾರ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಹಾಸನ ಸಿಟಿ ಟ್ರಾಫಿಕ್ ಪೊಲೀಸ್ ನೂತನ್ ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಆಟೊ ಚಾಲಕರಿಗೆ ಕ್ಯೂ ಆರ್. ಕೋಡ್ ವಿತರಿಸಿ ಮಾತನಾಡಿದರು.
ನಗರ ಸುತ್ತಲಿನ ಹಳ್ಳಿಗಳು ಅಭಿವೃದ್ಧಿ ಹೊಂದುತ್ತಿದ್ದು, ಆಟೊ ಚಾಲಕರು ರಾತ್ರಿ ಸಮಯದಲ್ಲೂ ಕಾರ್ಯನಿರ್ವಹಿಸಬೇಕಾಗುತ್ತದೆ. ಮಧ್ಯರಾತ್ರಿ ಪೊಲೀಸರ ನೆರವು ಬೇಕೆಂದರೆ ಈ ಆ್ಯಪ್ ಅವಶ್ಯ, ಚಾಲನಾ ಪರವಾನಗಿ, ವಿಮೆ ಹಾಗೂ ಸೂಕ್ತ ದಾಖಲೆಗಳೊಂದಿಗೆ ವಾಹನ ಚಲಾಯಿಸಬೇಕು ಎಂದರು.
ಕೋವಿಡ್‌ಗೆ ಔಷಧ ಬರಲು ನಾಲೈದು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ಅಂತರ ಪಾಲನೆ, ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಶ್ರಮವಹಿಸಿ ನೂತನ ಆ್ಯಪ್ ಅಭಿವೃದ್ಧಿಪಡಿಸಿದ್ದು, ಸದುಪಯೋಗ ಪಡೆಯಬೇಕು ಎಂದರು.
ಎಚ್‌ಸಿಟಿಪಿ ಆ್ಯಪ್ ಅಭಿವೃದ್ಧಿಪಡಿಸಿದ ರಂಜಿತ್ ಅವರನ್ನು ಸನ್ಮಾನಿಸಲಾಯಿತು. ಎನ್.ಆರ್ ವೃತ್ತದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾವನ್ನು ಸೇವೆ ಸರ್ಮಪಿಸಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ನಗರ ಸಿಪಿಐ ಕೃಷ್ಣರಾಜು, ಸಂಚಾರ ಠಾಣೆ ಪಿಎಸ್‌ಐಗಳಾದ ಪ್ರಮೋದ್ ಹಾಗೂ ಕುಸುಮಾ ಇದ್ದರು.