ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗ ಅಪಾಯಕಾರಿಯಾಗಿದ್ದು, ಎಲ್ಲಾ ರೈತರು ಉಚಿತವಾಗಿ ನಿರೋಧಕ ಲಸಿಕೆ ಹಾಕಿಸುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಹಾಸನ ತಾಲ್ಲೂಕು ಸಾಲಗಾಮೆಯ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಕಾಲು ಮತ್ತು ಬಾಯಿ ರೋಗ ನಿಯಂತ್ರಣದ ಮೊದಲನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನುವಾರುಗಳಿಗೆ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು. ಇಲ್ಲದಿದ್ದರೆ ರೋಗಗಳು ಎಲ್ಲಾ ಜಾನುವಾರುಗಳಿಗೆ ಹರಡುವುದರ ಜೊತೆಗೆ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಪ್ರಾಣ ಹಾನಿಯಾಗಿ ಆರ್ಥಿಕ ಸಂಕಷ್ಟ ಅನುಭವಿಸುವ ಸಂದರ್ಭಗಳೂ ಬರಬಹುದು. ಆದ್ದರಿಂದ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಬೇಕೆಂದು ಅವರು ತಿಳಿಹೇಳಿದರು.
ಜಿಲ್ಲಾ ಪಶೂಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ. ರಮೇಶವರು ಮಾತನಾಡಿ ಹಾಸನ ಜಿಲ್ಲೆ ಜಾನುವಾರು ಸಂಪತ್ತಿನಲ್ಲಿ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ ಎಚಿದರಲ್ಲದೆ, ಮೊದಲ ಸಾಲಿನಲ್ಲಿ ಬೆಳಗಾವಿ ಇದ್ದು, 13.5 ಲಕ್ಷ ಜಾನುವಾರುಗಳು ಬೆಳಗಾವಿ ಜಿಲ್ಲೆಯಲ್ಲಿದ್ದರೆ ಹಾಸನ ಜಿಲ್ಲೆಯಲ್ಲಿ 6.5 ಲಕ್ಷ ಜಾನುವಾರುಗಳಿವೆ ಎಂದರು.
ಈಗಾಗಲೇ ಸುಮಾರು 4.90 ಲಕ್ಷ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸಿದ್ದು, ಈ ಜಾನುವಾರುಗಳ ಸಂಪೂರ್ಣ ಮಾಹಿತಿ ತಂತ್ರಜ್ಞಾನದ ಮೂಲಕ ದೊರೆಯುತ್ತದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ 16 ಸುತ್ತಿನ ಕಾಲುಮತ್ತು ಬಾಯಿ ರೋಗ ನಿರೋಧಕ ಲಸಿಕೆ ಹಾಕಲಾಗಿದ್ದು, 17 ನೇ ಸುತ್ತಿನ ಲಸಿಕೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಸೀಲ್ದಾರ್ ಶಿವಶಂಕರಪ್ಪ, ಸಹಾಯಕ ನಿರ್ದೇಶಕರಾದ ಡಾ|| ವೆಂಕಟೇಶ್ ಮತ್ತು ಡಾ|| ಜಾನಕಿ ಮತ್ತು ಸಾಲಗಾಮೆ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ|| ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.