ಕೊರೋನ ಲಸಿಕೆ ಶೇಖರಣೆಗೆ ಅಗತ್ಯ ಕ್ರಮ ವಹಿಸಿ: ಜಿಲ್ಲಾಧಿಕಾರಿ ಸೂಚನೆ

0

ಕೊರೋನ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಅದನ್ನು ಜಿಲ್ಲೆಗೆ ತರಲು ಹಾಗೂ ಶೇಖರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಲಸಿಕೆ ಶೇಖರಣೆಗೆ ಸೂಕ್ತರೀತಿಯಲ್ಲಿ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರಲ್ಲದೆ, ಕೇಂದ್ರ ಸರ್ಕಾರದ ಆದೇಶದಂತೆ ಮೊದಲನೇ ಹಂತದಲ್ಲಿ ಇದನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರಕರಣಗಳನ್ನು ಕಡಿಮೆ ಮಾಡಲು ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ವಿಟಮಿನ್ ಮಾತ್ರೆಗಳ ವಿತರಣೆ ಸೇರಿದಂತೆ, ಹಾಸನಾಂಬ ದೇವಿಯ ಉತ್ಸವಕ್ಕೆ ಅಳವಡಿಸಲಾಗುತ್ತಿರುವ ಲೈಟಿಂಗ್ ವ್ಯವಸ್ಥೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕೊರೋನ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಹಾಗೂ ಪ್ರೇರಣೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸರ್ಕಾರಿ ನೌಕರರು ಹೆಚ್ಚಾಗಿ ಸಾರ್ವಜನಿಕರ ಸಂಪರ್ಕಕ್ಕೆ ಬರುವುದರಿಂದ ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆದೇಶಿಸಿದರಲ್ಲದೆ, ನಗರದ ಕೃಷಿ ಮಾರುಕಟ್ಟೆಯ ವರ್ತಕರು 15 ದಿನಕ್ಕೊಮ್ಮೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಹೆಚ್ ಅಧಿಕಾರಿ ಹಾಗೂ ಕೋವಿಡ್ ವ್ಯಾಕ್ಸಿನ್ ಜಿಲ್ಲಾ ನೋಡಲ್ ಅಧಿಕಾರಿಗಳಾದ ಕಾಂತರಾಜು ಅವರು ಮಾತನಾಡಿ ಜಿಲ್ಲೆಯಲ್ಲಿ ಪೋಲಿಯೋ ಸೇರಿದಂತೆ ಇತರೆ ವ್ಯಾಕ್ಸಿನೇಷನ್‍ಗಳ ವರದಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಆಯಾ ತಾಲ್ಲೂಕಿನ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸಿ ಚುಚ್ಚು ಮದ್ದು ಕುರಿತಾಗಿ ಸೂಕ್ತ ವರದಿ ನೀಡಲು ಆದೇಶಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಹಿಮ್ಸ್ ನ ಶಿಶುವೈದ್ಯ ವಿಭಾಗದ ಮುಖ್ಯಸ್ಥರಾದ ಡಾ|| ಪ್ರಸನ್ನಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ನಾಗೇಶ್ ಆರಾಧ್ಯ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here