ಜಿಲ್ಲೆಯಲ್ಲಿ ಪ್ರಸವ ವೇಳೆಯಲ್ಲಿನ ತಾಯಿ ಮಗು ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇನ್ನಷ್ಟು ಕಾಳಜಿ ವಹಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿಂದು ಕೆ.ಪಿ.ಎಂ.ಇ ಕಾಯ್ದೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಸ್ಪಷ್ಟ ವೈದ್ಯಕೀಯ ಮುಂಜಾಗ್ರತೆ ಹಾಗೂ ವಿಶೇಷ ಪ್ರಯತ್ನ ಮಾಡಿದರೆ ಕೆಲವು ಸಾವುಗಳನ್ನು ತಡೆಯುವ ಸಾಧ್ಯತೆಗಳಿರುತ್ತವೆ ಹಾಗಾಗಿ ನಿಗಾವಹಿಸುವುದು ಅಗತ್ಯ ಎಂದರು.
ಗರ್ಭಿಣಿಯರ ತಪಾಸಣೆ ಸಮರ್ಪಕವಾಗಿ ನಡೆಯಬೇಕು, ಪ್ರಸವ ಪೂರ್ವದಲ್ಲಿ ಏನಾದರೂ ಗಂಭೀರ ಸಮಸ್ಯೆಗಳು ಗಂಭೀರ ಇವೆಯೇ ಎಂಬುದನ್ನು ಗುರುತಿಸಿ ನಿರ್ದಿಷ್ಟಷ್ಟವಾದ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಎಲ್ಲಾ ಹೆರಿಗೆಗಳು ಆಸ್ಪತ್ರೆಯಲ್ಲಿಯೇ ನಡೆಯಬೇಕು ಆಶಾ ಕಾರ್ಯಕರ್ತೆಯರು ಎಲ್ಲಾ ಗರ್ಭಿಣಿ ಬಾಣಂತಿಯರ ಮನೆಗೆ ಕಾಲಕಾಲಕ್ಕೆ ಭೇಟಿ ನೀಡಿ ಅರಿವು ಮೂಡಿಸಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗಂಭೀರ ಆರೋಗ್ಯ ಸಮಸ್ಯೆಗಳ ಹೊರತಾದ ಪ್ರಕರಣಗಳಲ್ಲಿಯೂ ತಾಯಿ ಮಗುವಿನ ಸಾವುಗಳು ಉಂಟಾಗುವುದು ವಿಷಾದನೀಯ ವಿಶೇಷ ಕಾಳಜಿ ಅಗತ್ಯವಿರುವ ಗರ್ಭಿಣಿ ಬಾಣಂತಿಯರನ್ನು ಹಿಮ್ಸ್ ಆಸ್ಪತ್ರೆಗೆ ಪ್ರಾರಂಭಿಕ ಹಂತದಲ್ಲಿಯೇ ಕಳುಹಿಸಿ ನಿಗವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅನಿಯಂತ್ರಿತ ರಕ್ತದೊತ್ತಡ, ರಕ್ತಸ್ರಾವ ಪ್ರಕರಣಗಳಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು ತಾಯಿ ಹಾಗೂ ಪೋಷಕರಿಗೆ ಸೂಕ್ತ ಅರಿವು ನೀಡಿ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪ್ರತಿ ಪ್ರಕರಣವಾರು ವಿವರಗಳನ್ನು ಚಿಕಿತ್ಸೆ ನೀಡಿದ ವೈದ್ಯರಿಂದ ಹಾಗೂ ಇತರ ತಜ್ಞ ಪ್ರಸೂತಿ ತಜ್ಞರು ಹಾಗೂ ಶಸ್ತ್ರಚಿಕಿತ್ಸಕರಿಂದ ಪಡೆದ ಜಿಲ್ಲಾಧಿಕಾರಿಯವರು ಮುಂದಿನ ದಿನಗಳಲ್ಲಿ ಗರ್ಭಿಣಿ ಬಾಣಂತಿಯರು ಹಾಗೂ ಶಿಶುಮರಣ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ಶ್ರಮಿಸಬೇಕು, ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕೋವಿಡ್ ಸೋಂಕಿನ ಸಮಸ್ಯೆಗಳ ನಡುವೆಯೂ ಕ್ಷಯರೋಗ ಪತ್ತೆ ಪ್ರಕರಣಗಳು ನಿರಂತರವಾಗಿ ನಡೆಯಬೇಕು ಈ ಬಗ್ಗೆ ಎಲ್ಲಾ ತಾಲ್ಲೂಕುಗಳಲ್ಲಿಯೂ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.
ಕೆಲವು ಪ್ರಕರಣಗಳಿಗೆ ಕಾರಣ ಕೇಳಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿ ವಿವರ ಪಡೆಯುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಪಾಸಣೆ ಚಿಕಿತ್ಸಾ ಸೌಲಭ್ಯ ಹೆಚ್ಚಾಗಬೇಕು, ಎಲ್ಲಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಲ್ ನ್ಯಾಯಾಧೀಶರಾದ ರವಿಕಾಂತ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಆರ್ ಸಿ ಎಚ್ ಅಧಿಕಾರಿ ಡಾ||. ಕಾಂತರಾಜು, ಹಿರಿಯ ವೈದ್ಯರಾದ ಡಾ|| ಭಾರತಿ ರಾಜಶೇಖರ್ , ಐ.ಎಂ.ಎ ಅಧ್ಯಕ್ಷರಾದ ಡಾ|| ರಮೇಶ್, ತಾಲ್ಲೂಕು ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.