ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ನೀಡಿ: ಆರ್. ಗಿರೀಶ್
ಹೆ.ಪಿ.ಸಿ.ಎಲ್. ಗ್ಯಾಸ್ ಪೈಪ್‍ಲೈನ್ ಯೋಜನೆಗೆ ಒಳಪಡುವ ರೈತರ ಜಮೀನಿಗೆ ಹಾಗೂ ಬೆಳೆಹಾನಿಗೆ ಸರ್ಕಾರದ ನಿರ್ದೇಶನದಂತೆ ಬೆಲೆ ನಿಗಧಿಪಡಿಸಿ ಒಂದು ತಿಂಗಳಲ್ಲಿ ಪರಿಹಾರ ನೀಡುವಂತೆ ವಿಶೇಷ ಭೂ ಸ್ವಾದೀನಾಧಿಕಾರಿಯವರಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಹೆ.ಪಿ.ಸಿ.ಎಲ್. ಗ್ಯಾಸ್ ಪೈಪ್‍ಲೈನ್‍ಗೆ ಒಳಪಡುವ ರೈತರ ಜಮೀನಿನ ಬೆಲೆ ನಿಗಧಿ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಹಾಸನ ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ ಈ ಯೋಜನೆಗೆ ಒಳಪಡುವ ಜಮೀನು ಹಾಗೂ ಬೆಳೆಗೆ ನಿಯಮಾನುಸಾರ ಪರಿಹಾರ ನೀಡುವಂತೆ ಅವರು ತಿಳಿಸಿದರು.
ಹೆಚ್.ಪಿ.ಸಿ.ಎಲ್. ಗ್ಯಾಸ್ ಪೈಪ್‍ಲೈನ್ ಯೋಜನೆಯಿಂದ ಆಗುವ ಬೆಳೆಹಾನಿ, ತೋಟಗಾರಿಕೆಗೆ ಸಂಬಂಧಿಸಿದ ಹಾನಿ, ಮರಗಳ ಹಾನಿ, ಪೈಪ್‍ಲೈನ್ ಹಾನಿ ಹಾಗೂ ಮತ್ತಿತರ ಹಾನಿಗೆ ಒಳಗಾದ ಪ್ರತಿಯೊಬ್ಬ ರೈತರಿಗೂ ಮಾರ್ಗಸೂಚಿ ಹಾಗೂ ಮಾರುಕಟ್ಟೆ ದರದ ಅನುಗುಣವಾಗಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಗಳು ಹಾಗೂ ಇತರ ಗ್ರಾಮಗಳ ರೈತರ ಜಮೀನಿಗೆ ಸರ್ಕಾರದ ನಡಾವಳಿಯನ್ನು ಅನುಸರಿಸಿ ಬೆಲೆ ನಿಗಧಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಹೆ.ಪಿ.ಸಿ.ಎಲ್. ಗ್ಯಾಸ್ ಪೈಪ್‍ಲೈನ್ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಮಾತನಾಡಿ ಇದು ಭಾರತ ಸರ್ಕಾರದ ಯೋಜನೆಯಾಗಿದ್ದು, ಹಾಸನ ತಾಲ್ಲೂಕಿನಲ್ಲಿ 25 ಕಿ.ಮೀ. ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ 25 ಕಿ.ಮೀ. ಒಟ್ಟು 50 ಕಿ.ಮೀ. ಈ ಯೋಜನೆ ಹಾದುಹೋಗುತ್ತಿದೆ. ನವೆಂಬರ್ ಮೊದಲ ವಾರದಲ್ಲಿ ಪಂಚನಾಮೆ ಮಾಡಿ ರೈತರಿಗೆ ಪರಿಹಾರ ವಿತರಿಸಿ ನಂತರ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದರು.
ವಿಶೇಷ ಭೂ ಸ್ವಾದೀನಾಧಿಕಾರಿ ಮಂಜುನಾಥ್ ಜಿ.ಎನ್, ಹೆಚ್.ಪಿ.ಸಿ.ಎಲ್.ನ ಮುಖ್ಯ ಅಭಿಯಂತರರಾದ ಶೇಷಾದ್ರಿ, ತಹಶೀಲ್ದಾರ್ ಸಂತೋಷ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕಾಂಟ್ರಾಕ್ಟರ್‍ಗಳು ಸಭೆಯಲ್ಲಿ ಹಾಜರಿದ್ದರು.