2 ಹಂತಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಸಿದ್ಧತೆಗೆ ಚುನಾವಣಾ ಆಯೋಗ ಸೂಚನೆ

0

ಮುಂದಿನ ಮೂರು ವಾರಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಿಸಲು ಉಚ್ಛ ನ್ಯಾಯಾಲಯ ಆದೇಶಿಸಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಸೂಕ್ತ ಸಿದ್ಧತೆ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಡಾ.ಬಿ. ಬಸವರಾಜು ಅವರು ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೊರೋನಾ ಸಂದರ್ಭದಲ್ಲಿ ಚುನಾವಣೆ ನಡೆಸುವುದೇ ಒಂದು ರೀತಿಯ ಸವಾಲಾಗಿದೆ. ಆದರೆ ಗ್ರಾಮ ಪಂಚಾಯ್ತಿಯು ಪ್ರಜಾ ಪ್ರಭುತ್ವದ ಮೂಲ ಅಡಿಪಾಯವಾಗಿದೆ. ಹಾಗಾಗಿ ಎಲ್ಲಾ ಸೂಕ್ಷ್ಮ ವಿಷಯಗಳ ಮೇಲೂ ಹೆಚ್ಚಿನ ಗಮನಹರಿಸಿ, ಯಾವುದೇ ಲೋಪಗಳಿಲ್ಲದಂತೆ ನ್ಯಾಯಯುತವಾಗಿ ಚುನಾವಣೆ ನಡೆಸಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದರು.
ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿಯಾಗುವುದನ್ನು ತಪ್ಪಿಸಲು 1000 ಅಧಿಕ ಮತದಾರರನ್ನು ಒಳಗೊಂಡ ಮತಗಟ್ಟೆಗೆ ಹೆಚ್ಚುವರಿ ಕೊಠಡಿಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿ ಎಂದರಲ್ಲದೆ, ಮತಗಟ್ಟೆಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವುದರ ಜೊತೆಗೆ ಮತದಾರರಿಗೆ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಆದರೆ ಯಾವುದೇ ಕಾರಣಕ್ಕೂ ಮತದಾನದ ಸಂಖ್ಯೆಯಲ್ಲಿ ಇಳಿಕೆಯಾಗಬಾರದು ಎಂದು ಅವರು ಹೇಳಿದರು.
ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಉಪ ವಿಭಾಗಾಧಿಕಾರಿ ಮಟ್ಟದಲ್ಲಿ ಆಯ್ಕೆ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಹಾಗೂ ಚುನಾವಣೆ ಸಂದರ್ಭದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯು ಮತ ಚಲಾವಣೆಯನ್ನು ಅಂಚೆ ಮತ ಪತ್ರದ ಮೂಲಕ ಮಾಡುವುದೋ ಅಥವಾ ಪಿ.ಪಿ.ಇ ಕಿಟ್ ಧರಿಸಿ ತಾನೇ ಖುದ್ದಾಗಿ ಮತ ಚಲಾವಣೆ ಮಾಡುವುದೋ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ದೇಶನ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.
ಮಾಧ್ಯಮದವರು ಹಾಗೂ ಸಂಘ ಸಂಸ್ಥೆಗಳು ಚುನಾವಣೆ ಸಂದರ್ಭದಲ್ಲಿ ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿಬೇಕು. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುವುದರ ಜೊತೆಗೆ, ಚುನಾವಣಾ ಆಯೋಗಕ್ಕೆ ಇದರ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳು ಮತಗಟ್ಟೆಗಳ ದುರಸ್ಥಿ ಕಾರ್ಯವನ್ನು ಮಾಡಿಸಬೇಕು. ಜೊತೆಗೆ ಮತಗಟ್ಟೆಗಳಲ್ಲಿ ಅಂತರ್ಜಾಲ ಸೌಲಭ್ಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.
ಇದರ ಜೊತೆಗೆ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಿಸುವುದು, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಹಾಗೂ ಮತದಾರರಿಗೆ ಸೂಕ್ತ ಪ್ರಚಾರ ನೀಡುವುದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಆಯುಕ್ತರು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅವುಗಳಿಗೆ ಅಗತ್ಯ ಬಂದೋಬಸ್ತ್ ಕಲ್ಪಿಸಬೇಕು. ಚುನಾವಣೆ ಸಂದರ್ಭದಲ್ಲಿ ಹಣ, ಸಾಮಾಗ್ರಿಗಳು ಹಾಗೂ ಅಕ್ರಮ ಮದ್ಯ ವಿತರಣೆಯಾಗದಂತೆ ಅಬಕಾರಿ ಇಲಾಖೆಯ ಸಹಯೊಗದೊಂದಿಗೆ ಅಗತ್ಯ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಚುನಾವಣೆಗೆ ಅಗತ್ಯ ಅನುದಾನವನ್ನು ಒದಗಿಸಲಾಗುತ್ತಿದ್ದು, ಅದನ್ನು ಮಿತವಾಗಿ ವಿನಿಯೋಗ ಮಾಡಿ, ವಿನಿಯೊಗ ಮಾಡಿದ ಅನುದಾನದ ವಿವರವನ್ನು ಕಡ್ಡಾಯವಾಗಿ ಆಯೋಗಕ್ಕೆ ನಿಗದಿತ ಸಮಯದೊಳಗೆ ನೀಡಬೇಕು ಎಂದರಲ್ಲದೆ, ಚುನಾವಣೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಯಾವುದೇ ಅಧಿಕಾರಿ ರಜೆ ಅಥವಾ ಕೇಂದ್ರ ಸ್ಥಾನ ಬಿಟ್ಟು ಹೋಗುವ ಹಾಗಿಲ್ಲ ಎಂದು ಚುನಾವಣಾ ಆಯೋಗದ ಆಯುಕ್ತರು ತಿಳಿಸಿದರು.
ಸಭೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹೊನ್ನಾಂಬ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಚುನಾಚಣೆ ತಹಶೀಲ್ದಾರ್ ಹೆಚ್.ಟಿ ಪದ್ಮನಾಭಶಾಸ್ತ್ರಿ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here