ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೇ
ರಾಜ್ಯಾದ್ಯಂತ ಶೀಘ್ರ ಹೊಸ ಕಾರ್ಯಕ್ರಮ ಜಾರಿ: ಅಶೋಕ್
ಹಾಸನ: ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಲಿದೆ
ಎಂಬ ತಜ್ಞರ ಸೂಚನೆ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಜ್ಯ ಸರ್ಕಾರ, ವಿನೂತನ ಕಾರ್ಯಕ್ರಮದ ಮೂಲಕ ಅದನ್ನು ಸಮರ್ಪಕವಾಗಿ ತಡೆಯಲು ಮುಂದಾಗಿದೆ.
ಇದಕ್ಕಾಗಿ ರಾಜ್ಯಾದ್ಯಂತ ‘ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ’ ಎಂಬ ಕಾರ್ಯಕ್ರಮಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ `ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿ ಆದ ಹಿನ್ನೆಲೆ ಅದೇ ಮಾದರಿಯಲ್ಲಿ ಮೂರನೇ ಅಲೆ ತಡೆಗೆ ರಾಜ್ಯಾದ್ಯಂತ ‘ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ’ ಕಾರ್ಯಕ್ರಮ ಜಾರಿಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಕೋವಿಡ್ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆ, ಪ್ರತೀ ತಾಲೂಕಿಗೆ ತಜ್ಞ ವೈದ್ಯರನ್ನೊಳಗೊಂಡ ಎರಡು ವಾಹನಗಳನ್ನು ನಿಯೋಜಿಸಲಾಗುವುದು.
ಈ ತಂಡವು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು.ಅಗತ್ಯವಿದ್ದರೆ ಜಿಲ್ಲಾ ಆಸ್ಪತ್ರೆಗಳಿಗೆ ಕರೆತಂದು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಅನುದಾನದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡಿ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುವುದು. ಕಿಟ್ನಲ್ಲಿ ಅರ್ಧ ಕೆಜಿ ಹಾಲಿನ ಪುಡಿ, ಬಾದಾಮಿ
200 ಗ್ರಾಂ., ಬಿಸ್ಕೆಟ್, ಮಲ್ಟಿ ವಿಟಮಿಟ್ ಸಿರಾಪ್ಗಳನ್ನು ನೀಡಲಾಗುವುದು ಎಂದು ಹೇಳಿದರು.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಈಗಾಗಲೇ ರಚಿಸಿದ್ದ ಟಾಸ್ಕ್ ಫೋರ್ಸ್ ಕಮಿಟಿಯನ್ನು ರದ್ದು ಮಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಂಬAಧಪಟ್ಟ ಇಲಾಖೆ ಅಧಿಕಾರಿಗಳನ್ನು ಒಳಗೊಂಡAತೆ ಹೊಸ ಕಮಿಟಿಯನ್ನು ಶೀಘ್ರ ರಚಿಸಲಾಗುವುದು ಎಂದು ಹೇಳಿದರು.
ಬಾಕ್ಸ್
ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:
ಹೇಮಾವತಿ ಜಲಾಶಯ ಯೋಜನೆಯ ನಿರಾಶ್ರಿತರಿಗೆ ಭೂಮಿ ಮಂಜೂರು ಮಾಡುವಲ್ಲಿ ನಡೆದಿರುವ ಭೂ ಅಕ್ರಮದಲ್ಲಿ ಡಿಸಿ, ಎಸಿ, ತಹಸೀಲ್ದಾರ್ ಸೇರಿದಂತೆ ಯಾವುದೇ ಅಧಿಕಾರಿಗಳು ಭಾಗಿಯಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ತಿಳಿಸಿದರು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಅಕ್ರಮವಾಗಿ ಮಂಜೂರಾಗಿರುವ ಭೂಮಿ ಮತ್ತೆ ಸರ್ಕಾರದ ವಶಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅವ್ಯವಹಾರದಿಂದ ಯಾರದೋ ಪಾಲಾಗಿರುವ ಹಣ ಮತ್ತೆ ಸರ್ಕಾರಕ್ಕೆ ಬರಲೇಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಜೆ.ಗೌಡ ಇದ್ದರು.