ಮಂಗಳೂರು / ಹಾಸನ / ವಿಜಯಪುರ : ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜನರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವೆ ಸಂಚಾರ ನಡೆಸುವ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಪ್ರತಿದಿನ ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ರೈಲು ಸಂಚಾರ ನಡೆಸುತ್ತದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಏಕೈಕ ರೈಲು ಇದಾಗಿದೆ. ಈ ರೈಲಿಗೆ ಜನರಿಂದ ಸಹ ಉತ್ತಮ ಸ್ಪಂದನೆ ಸಿಕ್ಕಿದೆ.
ಹಿಂದಿನ ಆದೇಶದಂತೆ ವಿಜಯಪುರದಿಂದ ಹೊರಡುವ ರೈಲು ನಂಬರ್ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ರೈಲು ಸೇವೆಯು 31/1/2023ಕ್ಕೆ ಅಂತ್ಯವಾಗಬೇಕಿತ್ತು. ಹೊಸ ಆದೇಶದಂತೆ ರೈಲು ಸೇವೆಯನ್ನು 1/2/2023 ರಿಂದ 31/3/2023ರ ತನಕ ವಿಸ್ತರಣೆ ಮಾಡಲಾಗಿದೆ. ಮಂಗಳೂರಿನಿಂದ ಹೊರಡುವ ರೈಲು ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್ ಪ್ರೆಸ್ ರೈಲು ಸೇವೆ
1/2/2023ರಂದು ಅಂತ್ಯಗೊಳ್ಳಬೇಕಿತ್ತು. ಈ ರೈಲು ಸೇವೆಯನ್ನು 2/2/2023 ರಿಂದ 1/4/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಮಲೆನಾಡು ಮತ್ತು ಕರಾವಳಿ ಮೂಲಕ ಸಾಗುವ ಈ ರೈಲು ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪರ್ಕಿಸುತ್ತದೆ. ಬಾಗಲಕೋಟೆ-ಗದಗ-ಹಾವೇರಿ-ಬ್ಯಾಡಗಿ-ಹರಿಹರ-ದಾವಣಗೆರೆ-ಹಾಸನ-ಅರಸೀಕರೆ-ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ಮಾರ್ಗವಾಗಿ ಸಂಚಾರ ನಡೆಸುತ್ತದೆ.ಈ ರೈಲಿನಿಂದ ಉತ್ತರ ಕರ್ನಾಟಕದ ಜನರು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯದಂತಹ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಸಹಾಯಕವಾಗಿದೆ. ಅಲ್ಲದೇ ಮಂಗಳೂರು, ಉಡುಪಿ, ಮಣಿಪಾಲಗಳಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಪಡೆಯಲು ಸಹ ಅನುಕೂಲವಾಗಿದೆ.
ಮಾರ್ಗ ಬದಲಾವಣೆ ಮಾಡದಂತೆ ಆಗ್ರಹ
ಮಂಗಳೂರು ಜಂಕ್ಷನ್-ವಿಜಯಪುರ ರೈಲು ಮಾರ್ಗವನ್ನು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಮುಖರೊಬ್ಬರು
ನೈಋತ್ಯ ರೈಲ್ವೆಗೆ ಪತ್ರವನ್ನು ಬರೆದು ಈ ರೈಲನ್ನು ಕೊಂಕಣ ಮಾರ್ಗದಲ್ಲಿ ಲೋಂಡಾ ಮೂಲಕ ಸಾಗಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ.ಪಶ್ಚಿಮ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಪತ್ರ ಬರೆದಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿರುವ ರೈಲು ಮಾರ್ಗ ಬದಲಾವಣೆ ಮಾಡುವುದು ಸರಿಯಲ್ಲ. ಬೇರೆ ಮಾರ್ಗದಲ್ಲಿ ಬೇಕಿದ್ದರೆ ಮತ್ತೊಂದು ರೈಲು ಓಡಿಸಲಿ ಎಂದು ಒತ್ತಾಯಿಸಿದ್ದಾರೆ.
ಹಾಸನ-ಅರಸೀಕೆರೆ ಮಾರ್ಗವಾಗಿ ಕರಾವಳಿ ಮತ್ತು ಉತ್ತರ ಕರ್ನಾಟಕಕ್ಕೆ ಸಂಪರ್ಕಿಸಲು ಇರುವುದು ಇದೊಂದೇ ರೈಲು. ಈ ರೈಲಿನ ಮಾರ್ಗವನ್ನು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಲಾಗಿದೆ. ಅಲ್ಲದೇ
ಮಂಗಳೂರು ಜಂಕ್ಷನ್-ವಿಜಯಪುರ ಮಾರ್ಗದ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂಬ ಆಗ್ರಹ ಹಲವಾರು ದಿನಗಳಿಂದ ಇದೆ. ಖಾಯಂಗೊಳಿಸಲು ಆಗ್ರಹ ಮಂಗಳೂರು ಜಂಕ್ಷನ್-ವಿಜಯಪುರ ನಡುವೆ ಪ್ರತಿದಿನದ ರೈಲನ್ನು ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವ ಈ ರೈಲನ್ನು ಖಾಯಂಗೊಳಿಸಬೇಕು ಎಂದು ಸಹ ಆಗ್ರಹಿಸಲಾಗುತ್ತಿದೆ.
ಆದರೆ ರೈಲ್ವೆ ಇಲಾಖೆ ಈ ಕುರಿತು ಯಾವುದೇ ಅಂತಿಮ ತೀರ್ಮಾನವನ್ನು ಇದುವರೆಗೂ ಪ್ರಕಟಿಸಿಲ್ಲ.ಕೋವಿಡ್ ಸಂದರ್ಭದಲ್ಲಿ ಈ ರೈಲನ್ನು ರದ್ದುಗೊಳಸಲಾಗಿತ್ತು. ಬಳಿಕ
ಪ್ರಯಾಣಿಕರ ಬೇಡಿಕೆ ಹಿನ್ನಲೆ ಮತ್ತೆ ಆರಂಭಿಸಲಾಗಿತ್ತು. ಆದರೆ ರೈಲು ಇನ್ನೂ ಖಾಯಂಗೊಳ್ಳದೇ ತತ್ಕಾಲ್ ನೆಲೆಯಲ್ಲಿಯೇ ಸಾಗುತ್ತಿದೆ. ಇದರಿಂದಾಗಿ ರೈಲು ಪ್ರಯಾಣ ದರವೂ ಹೆಚ್ಚಿದೆ.ಈ ರೈಲನ್ನು ಅವಲಿಂಬಿಸಿರುವವರಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ದೇವಾಲಯಗಳಿಗೆ ಭೇಟಿ ನೀಡುವವರೇ ಹೆಚ್ಚು. ಒಂದು ವೇಳೆ ರೈಲನ್ನು ಖಾಯಂಗೊಳಿಸಿದರೆ ಟಿಕೆಟ್ ದರ ಕಡಿಮೆ ಆಗಲಿದೆ. ಇದರಿಂದ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.