ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕಮಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವಿದ್ ಅಖ್ತರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ, ಹಾಲು ಮಾರಾಟ ಬೂತ್‍ಗಳು, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಳಿಗೆಗಳು, ನ್ಯಾಯಬೆಲೆ ಅಂಗಡಿಗಳು, ಮೆಡಿಕಲ್ ಶಾಪ್‍ಗಳು ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಕೋವಿಟ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳ ಕುರಿತು ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಮುದ್ರಿಸಿ ಪ್ರದರ್ಶೀಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರಿಗೆ ಕೋವಿಡ್ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲು ಸುದ್ದಿ ಮಾದ್ಯಮಗಳಲ್ಲಿ, ಆಲ್ ಇಂಡಿಯಾ ರೇಡಿಯೋದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಟಾಗ್‍ಲೈನ್, ಜಿಂಗಲ್ಸ್, ಕೋವಿಡ್ ಪರಿಚಯ ಚಿತ್ರಣಗಳು ಮತ್ತು ಸಣ್ಣ ಅನಿಮೇಆಷನ್ ವೀಡಿಯೋಗಳು, ಹಾಡುಗಳಲ್ಲಿ ಪ್ರಕಟಿಸಿ ಅರಿವು ಮಾಡಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ, ಸಾರ್ವಜನಿಕ ಶೌಚಾಲಯದ ಉಪಯೋಗಿಸುವ ಬಗ್ಗೆ ಹಾಗೂ ನಗರದ ಪುರಸಭೆಯ ನಿಯಮಗಳ ಬಗ್ಗೆ ಸರ್ಕಾರದ ವಿವಿಧ ಇಲಾಖೆಗಳು ಅರಿವು ಮೂಡಿಸುವಂತೆ ತಿಳಿಸಿದರಲ್ಲದೇ, ಶಾಲೆಯ ಶಿಕ್ಷಕರು, ಪ್ರಾಂಶುಪಾಲರು ಕೋವಿಡ್-19 ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳು ಅಭಿಯಾನಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಿ ಹಾಗೂ ಸ್ಥಳೀಯವಾಗಿ ಇಲಾಖಾವಾರು ಲಭ್ಯವಿರುವ ಅನುದಾನ ಬಳಸಿ ಕೈಗಾರಿಕೆಗಳಿಂದಲೂ ಪ್ರಾಯೋಜಿಕತ್ವ ಪಡೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ವಿವಿಧ ಇಲಾಖೆಗಳಿಗೆ ಜವಬ್ದಾರಿ ಹಾಗೂ ಗುರಿಯನ್ನು ನಿಗದಿ ಪಡಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರು ತಿಳಿಸಿದರು.
ಪಂಚಾಯಿತಿ ಕಚೇರಿಗಳು ಹಾಗೂ ಸರ್ಕಾರಿ ಕಟ್ಟಡಗಳಲ್ಲಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕೋವಿಡ್-19 ಕುರಿತ ಅರಿವು ಮೂಡಿಸುವ ಚಿತ್ರಗಳನ್ನು ಚಿತ್ರಿಸಿ ಮತ್ತು ಪೋಸ್ಟರ್‍ಗಳನ್ನು ಅಂಟಿಸಿ ಅಧಿಕಾರಿ ಸಿಬ್ಬಂದಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಕೋವಿಡ್ ಸೋಂಕಿತರ ಸಂಖ್ಯೆ ಪರಿಣಾಮಕಾರಿ ನಿಯಂತ್ರಣ ಕ್ರಮಕೈಗೊಳ್ಳು ಹಾಗೂ ಸಾವಿನ ಪ್ರಮಾಣ ಕಡಿಮೆ ಮಾಡಲು ಕೋವಿಡ್ ಕೇರ್ ಕೇಂದ್ರಗಳನ್ನು ಹೆಚ್ಚಿಸುವಂತೆ ಹಾಗೂ ಹೋಂ ಐಸೋಲೇಷನ್‍ನಲ್ಲಿದ್ದರೆ ಅಪಾಯ ಎದುರಾಗಬಹುದಾದ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ವರ್ಗಾಯಿಸುವಂತೆ ಜಾವಿದ್ ಅಖ್ತರ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರತಿ ಯಾಲ್ಲೂಕು ಆಸ್ಪತ್ರೆಗಳಲ್ಲಿಯೂ ಕಡ್ಡಾಯವಾಗಿ ಆಮ್ಲಜನಕ ಬೇಡ್‍ಗಳ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‍ಗಳ ಸಾಮಥ್ರ್ಯ ಹೆಚ್ಚಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತರನ್ನು ಪತ್ತೆಹಚ್ಚಲು ರ್ಯಾಟ್ ಪರೀಕ್ಷೆಗಿಂತ ಹೆಚ್ಚು ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡುವುದರ ಜೊತೆಗೆ ಪ್ರತಿ ಲ್ಯಾಬ್‍ಗಳಲ್ಲಿಯೂ 2 ಆರ್.ಟಿ.ಪಿ.ಸಿ.ಆರ್. ಮಷಿನ್ ಮತ್ತು ಆರ್.ಎನ್.ಎ ಮಷಿನ್ ಇಡುವಂತೆ ಅಧಿಕಾರಿಗಳಿಗೆ ಜಾವಿದ್ ಅಖ್ತರ್ ಅವರು ಸೂಚನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ.ಎಸ್. ಹರ್ಷ ಅವರು ಮಾತನಾಡಿ ಕೋವಿಡ್ ಸೋಂಕು ತಡೆಯಲು ಸರಳ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತಿತರ ಕ್ರಮಗಳ ಬಗ್ಗೆ ಸ್ಥಳೀಯ ಕೇಬಲ್ ನೆಟ್ ವರ್ಕ್ ನಲ್ಲಿ ಪ್ರಸಾರ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಹಾಗೆ ಪ್ರಚಾರ ಮಾಡಬಹುದು, ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿಗಳು ಹಾಗೂ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳು ಕೋವಿಡ್ ನಿಯಂತ್ರಣದ ಬಗ್ಗೆ ವೀಡಿಯೋ ಸಂದೇಶಗಳನ್ನು ಹೆಚ್ಚು ಪ್ರಚಾರ ಮಾಡುವುದರಿಂದ ಹಾಗೂ ಹೆದ್ದಾರಿ ಫಲಕಗಳಲ್ಲಿ ರೋಗದ ನಿಯಂತ್ರಣದ ಬಗ್ಗೆ ಪ್ರಚಾರ ವ್ಯಾಪಕವಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮೂಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.