2021 ರ ಮಾ. 21 ರವರೆಗೂ ಇದಕ್ಕೆ ಅವಕಾಶ ಇದ್ದು, ಯಾವುದೇ ಲೋಪ ಇಲ್ಲದೆ ಈ ಪ್ರಕ್ರಿಯೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಸಂಬಂಧೀಸಿದಂತೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಬೆಂಬಲ ಬೆಲೆ ಯೋಜನೆಯಡಿ ಉತ್ತಮ ಗುಣಮಟ್ಟದ ಭತ್ತಕ್ಕೆ 1,888 ರೂ ಪ್ರತಿ ಕ್ವಿಂಟಾಲ್ಗೆ ನಿಗಧಿಯಾಗಿದ್ದು, ಕಡಿಮೆ ಗುಣಮಟ್ಟದ ಭತ್ತಕ್ಕೆ 1,868 ರೂ ನಿಗಧಿಯಾಗಿದೆ. ಭತ್ತವನ್ನು ನೀಡುವ ರೈತರಿಗೆ ಗರಿಷ್ಠ ಮೂರು ದಿನಗಳಲ್ಲಿ ವಿಳಂಬವಾಗದೆ ಅವರ ಖಾತೆಗೆ ಹಣ ವರ್ಗಾವಣೆಯಾಗುವಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ದಾಖಲಾತಿಗಳನ್ನು ಖರೀದಿಗೆ ಮುನ್ನವೇ ಸರಿಯಾಗಿ ಪರಿಶೀಲಿಸಿ ಪಡೆಯಿರಿ ಎಂದರು.
ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಸಾಕಷ್ಟು ದೀರ್ಘ ಸಮಯಾವಕಾಶ ಇದೆ. ರೈತರು ಯಾವುದೇ ಆತುರ ಮಾಡದೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಾವು ನೀಡುತ್ತಿರುವ ದಾಖಲಾತಿಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಂಡು ಫ್ರೂಟ್ಸ್ ಗುರುತಿನ ಚೀಟಿ ಪಡೆದು ಸರಿಯಾದ ಬ್ಯಾಂಕ್ ದಾಖಲಾತಿಗಳನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾದ್ಯಂತ ಒಟ್ಟು 6 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅರಸೀಕೆರೆ ಹೊರತುಪಡಿಸಿ ಹಾಗೂ ಆಲೂರು ತಾಲ್ಲೂಕಿನ ಭತ್ತವನ್ನು ಹಾಸನ ಕೇಂದ್ರದಲ್ಲಿ ಖರೀದಿಸಲು ಆದೇಶ ಬಂದಿದೆ. ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕ್ಕಟ್ಟೆಯಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ನ.30 ರಿಂದ ಭತ್ತ ಖರೀದಿಗೆ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಿಬ್ಬಂದಿಗಳ ನೇಮಕ, ಅಕ್ಕಿ ಗಿರಣಿಗಳಲ್ಲಿ ಇರುವ ಹಲ್ಲಿಂಗ್ ಹಾಗೂ ಭತ್ತ ಸಂಗ್ರಹಣೆ ಸಾಮಥ್ರ್ಯ ವಿವರಗಳನ್ನು ಪಡೆದು ರೈತರಿಗೆ ಪ್ರಚಾರ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಡಿಸೆಂಬರ್ ತಿಂಗಳಲ್ಲಿ ಶೀತದ ವಾತಾವರಣ ಹೆಚ್ಚಾಗುವುದರಿಂದ ದಾಸ್ತಾನು ಹಾಳಾಗುವ ಸಂಭವವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಭತ್ತ ಖರೀದಿಯಲ್ಲಿ ಕೆಲವು ಷರತ್ತುಗಳಿದ್ದು, ಒಬ್ಬ ರೈತ ಗರಿಷ್ಠ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಬೆಂಬಲ ಬೆಲೆ ಯೋಜನೆಯಲ್ಲಿ ನೀಡಬಹುದಾಗಿದೆ ಎಂದರಲ್ಲದೆ ಜಿಲ್ಲೆಯಲ್ಲಿ ಭತ್ತದ ಜೊತೆಗೆ ರಾಗಿ ಹಾಗೂ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಅವುಗಳಿಗೂ ಕೂಡ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲು ಅವರು ಸೂಚಿಸಿದರು.
ಬಿತ್ತಿ ಪತ್ರಗಳು, ದಿನಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ಈ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ನೀಡಿ ಎಂದರಲ್ಲದೆ ರೈತರ ನೊಂದಣಿಗೆ ಬೇಕಾದ ಅಗತ್ಯ ದಾಖಲಾತಿಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ಎಂದರು.
ಜಂಟಿ ಕೃಷಿ ನಿರ್ದೇಶಕರಾದ ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಯೋಗೇಶ್, ಎ.ಪಿ.ಎಂ.ಸಿ ಕಾರ್ಯದರ್ಶಿ ಶ್ರೀಹರಿ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.