ಹಾಸನ : ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳ ನೆರವಿಗೆ ರೂಪಿಸಲಾಗಿರುವ ಆತ್ಮ ನಿರ್ಭರ್ ಸ್ವ ನಿಧಿ ಸಾಲ ಯೋಜನೆ ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಬ್ಯಾಂಕ್ ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ನಗರಾಭಿವೃದ್ಧಿ ಕೋಶದ ಪ್ರಭಾರಿ ಯೋಜನಾ ನಿರ್ದೇಶಕರಾದ ಬಿ.ಎ.ಜಗದೀಶ್ ತಿಳಿಸಿದ್ದಾರೆ.
ಸ್ವ ನಿಧಿ ಯೋಜನೆ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಯವರು ಸಹ ಬಗ್ಗೆ ಸೂಚನೆಗಳನ್ನು ನೀಡಿದ್ದು ಶೀಘ್ರ ಜಾರಿಗೆ ಕ್ರಮವಹಿಸಬೇಕಿದೆ ಎಂದರು.
ಸ್ವ ನಿಧಿ ಯೋಜನೆ ಅನುಷ್ಠಾನದಲ್ಲಿ ಬ್ಯಾಂಕುಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಡುವೆ ಅಂತರ ಕಂಡುಬರುತ್ತಿದ್ದು ಅದನ್ನು ಸರಿಪಡಿಸಲು ಸಮನ್ವಯ ಅಧಿಕಾರಿಗಳನ್ನು ನೇಮಿಸಬೇಕಿದೆ ಬಿ.ಎ.ಜಗದೀಶ್ ಹೇಳಿದರು.
ಈ ಸಮನ್ವಯ ಅಧಿಕಾರಿಗಳು ಬ್ಯಾಂಕುಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಅರಿವು ನೀಡಿ ನೊಂದಣಿ ಮಾಡಿಸಿ ಸಾಲ ಸೌಲಭ್ಯದ ಅನುಕೂಲ ಕಲ್ಪಿಸಬೇಕು ಹಾಗೂ ಸ್ವನಿಧಿ ಯೋಜನೆಯಡಿ ಪ್ರಸ್ತುತ ಇದುವರೆಗೂ ಬೀದಿ ಬದಿ ವ್ಯಾಪಾರಿಗಳು ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸದಿದ್ದಲ್ಲಿ ಕೂಡಲೇ ಸಂಬಂದ ಪಟ್ಟ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ಆನ್ಲೈನ್ ಅರ್ಜಿ ನೊಂದಾಯಿಸಬೇಕು ಎಂದು ಬಿ.ಎ ಜಗದೀಶ್ ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್ ಅವರು ಮಾತನಾಡಿ ಎಲ್ಲಾ ಬ್ಯಾಂಕುಗಳು ಸಾಲ ಸೌಲಭ್ಯ ಮಂಜೂರಾತಿಗೆ ಸಮನ್ವಯ ಅಧಿಕಾರಿಗಳನ್ನು ಸಂಪರ್ಕಿಸಿ ಸಾಲ ಯೋಜನೆ ಕುರಿತು ಈಗಾಗಲೇ ಬ್ಯಾಂಕುಗಳಿಗೆ ಸರ್ಕಾರಿ ಸುತ್ತೋಲೆ, ಆದೇಶಗಳು ರವಾನೆಯಾಗಿದ್ದು ಅದರಂತೆ ಕ್ರಮವಹಿಸಿ ಎಂದು ಹೇಳಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಡಾ.ರಾಜಶೇಖರ್ ಕನ್ನಾಳ ಮಾತನಾಡಿ ಸ್ವನಿಧಿ ಯೋಜನೆಯ ಉದ್ದೇಶ ಸ್ವರೂಪ ಅನುಷ್ಠಾನದಲ್ಲಿರುವ ತೊಡಕು ಹಾಗೂ ಅದನ್ನು ನಿವಾರಿಸಿಕೊಳ್ಳುವ ಮಾರ್ಗದ ಬಗ್ಗೆ ವಿವರಿಸಿ ಹಾಗೂ ಕೋವಿಡ್ 19 ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೀವಾನೋಪಾಯ ಅಭಿವೃದ್ಧಿಗಾಗಿ ಹಾಗೂ ಅವರ ವ್ಯವಹಾರವನ್ನು ಪುನರ್ ಪ್ರಾರಂಭಿಸಲು ಬಂಡವಾಳ ಒದಗಿಸುವ ಸಲುವಾಗಿ ಜಾರಿಗೆ ತಂದಿರುವ ಯೋಜನೆಯಾಗಿದೆ ಎಂದು ತಿಳಿಸಿದರು.
ಹಾಸನ ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ, ಕೌಶಲ್ಯ ಅಭಿವೃದ್ಧಿ ಇಲಾಖೆ ಕೋಮಲ ಎ.ಜೆ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್ ವ್ಯವಸ್ಥಾಪಕರುಗಳು, ಹಾಗೂ ಎಲ್ಲಾ ಬ್ಯಾಂಕ್ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.