ಚನ್ನರಾಯಪಟ್ಟಣ ಪುರಸಭೆಗೆ
ನೂತನ ಅಧ್ಯಕ್ಷೆಯಾಗಿ ರಾಧಾ
ಚನ್ನರಾಯಪಟ್ಟಣ ಪುರಸಭೆ ನೂತನ ಅಧ್ಯಕ್ಷರಾಗಿ ರಾಧಾ ಮಂಜುನಾಥ್(ಪುರಿ) ಅವಿರೋಧ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಜಿ.ಆರ್.ಸುರೇಶ್ ಅವರ ರಾಜೀನಾಮೆ ನಂತರ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ರಾಧಾ ಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾಗಿದ್ದ ತಹಸೀಲ್ದಾರ್ ಗೋವಿಂದರಾಜು ಪ್ರಕಟಿಸಿದರು.
ನೂತನ ಅಧ್ಯಕ್ಷರನ್ನು ಪುರಸಭೆ ಆವರಣದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಸದಸ್ಯರು ಅಭಿನಂದಿಸಿದರು.
ಬಳಿಕ ಮಾತನಾಡಿದ ಶಾಸಕರು, ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಪುರಸಭೆಯ ಜಾಗದಲ್ಲಿ ಪುರಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಹಾಗೆಯೇ ಸ್ಥಳೀಯ ಪುರಸಭೆ, ನಗರಸಭೆಯಾಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆಗಳನ್ನೂ ಹೊಂದಿದ್ದು, ಸರಕಾರದಲ್ಲಿ ಅನುದಾನದ ಕೊರತೆಯಿಂದಾಗಿ ತಡವಾಗುತ್ತಿದೆ ಎಂದರು.
ನಗರೋತ್ಥಾನ ಯೋಜನೆಯಡಿ 6.5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ
ಕೈಗೆತ್ತಿಕೊಂಡಿದ್ದು, ಪುರಸಭೆಗೆ ನಾಗರಿಕರು ಪಾವತಿ ಮಾಡಿರುವ ಸುಮಾರು 4 ಕೋಟಿ ರೂ ತೆರಿಗೆ ಹಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು. ಎಲ್ಲಾ ವಾರ್ಡ್ ಗಳಿಗೆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ದೀಪಗಳನ್ನು ಖರೀದಿಸಲು 30 ಲಕ್ಷ ರೂ.ಗೆ ಅನುಮೋದನೆ ದೊರೆತಿದೆ ಎಂದರು.
ಇದೇ ವೇಳೆ ನೂತನ ಅಧ್ಯಕ್ಷರನ್ನು ಎಲ್ಲ ಸದಸ್ಯರೂ ಅಭಿನಂದಿಸಿದರು. ಪುರಿ ಮಂಜುನಾಥ್ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.