ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

0

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.
ಹಾಸನ: ವಿಶ್ವ ಪ್ರಸಿದ್ದ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ಮುಂಜಾನೆ ನಿಧನರಾಗಿದ್ದಾರೆ ಅವರಿಗೆ 74 ವರ್ಷ ವಯಸ್ಸಾಗಿತ್ತು.
ಬೆಳಿಗ್ಗೆ ನಿತ್ಯಕರ್ಮಕ್ಕೆ ಎದ್ದ ವೇಳೆ ಕಾಲು ಜಾರಿ ಶ್ರೀಗಳು ಬಿದ್ದಿದ್ದು, ನಂತರ ಬೆಳ್ಳೂರಿನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಶ್ರೀಗಳು ವಿಧಿವಶರಾಗಿದ್ದಾರೆ.
ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಶ್ರೀಗಳು ಇಂದು ಬೆಳಿಗ್ಗೆ ನಿತ್ಯಕರ್ಮಕ್ಕೆ ಎದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ಕೂಡಲೇ ಮಠದ ಸಿಬ್ಬಂದಿ ಶ್ರೀಗಳನ್ನು

ಬೆಳ್ಳೂರಿನ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರವಾಗಿ ಗಾಯವಾದ್ದರಿಂದ ಚಿಕಿತ್ಸೆ ಫಲಿಸದೆ ಶ್ರೀಗಳು ಕೊನೆಯುಸಿರೆಳೆದಿದ್ದಾರೆ.
ಸ್ವಾಮೀಜಿ ನಿಧನ ವಿಚಾರ ತಿಳಿಯುತ್ತಿದ್ದಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮತ್ತಿತರರು ಬೆಳ್ಳೂರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನ ವ್ಯವಸ್ಥೆ
ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ವಸ್ತಿಶ್ರೀಗಳ ಅಂತಿಮ ದರ್ಶನಕ್ಕೆ ವಿಧಾನ ಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ , ಭಾರತೀಯ ಜನತಾ ಪಕ್ಷ ಅಧ್ಯಕ್ಷರು ಹಾಗೂ ಸಂಸತ್ ಸದಸ್ಯರಾದ ನವೀನ್ ಕುಮಾರ್ ಕಟಿಲ್ ,ಶಾಸಕರಾದ ಹೆಚ್.ಡಿ ರೇವಣ್ಣ, ಸಿ.ಎನ್ ಬಾಲಕೃಷ್ಣ, ಪ್ರೀತಂ ಗೌಡ ,ಹೆಚ್ ವಿಶ್ವನಾಥ ಸೇರದಂತೆ ಅನೇಕ ಹಾಲಿ,ಮಾಜಿ ಶಾಸಕರು, ನೂರಾರು ಅಧಿಕಾರಿಗಳು ಅಂತಿಮ ದರ್ಶನ ಪಡೆದರು ವಿವಿಧ ಕ್ಷೇತ್ರದ ಗಣ್ಯರು ಸೇರಿ

ರಾಜ್ಯದ ವಿವಿಧ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ಭದ್ರತೆಗಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.
ಗಣ್ಯರ ಸಂತಾಪ:
ಸ್ವಾಮೀಜಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಮಾಜಿಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ, ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಶಾಸಕರಾದ ಹೆಚ್.ಡಿ ರೇವಣ್ಣ, ಸಿ.ಎನ್ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಸೂರಜ್ ರೇವಣ್ಣ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ:


ಶ್ರವಣಬೆಳಗೊಳದ ಚಂದ್ರಗಿರಿಬೆಟ್ಟದ ತಪ್ಪಲಿನಲ್ಲಿ ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂಜೆ ಸೂರ್ಯಸ್ತಮಕ್ಕೂ ಮುನ್ನವೇ ಶ್ರವಣಬೆಳಗೊಳದ ಚಂದ್ರಗಿರಿ (ಚಿಕ್ಕಬೆಟ್ಟ, ಸಮಾದಿ ಗುಡ್ಡ) ಬೆಟ್ಟದ ತಪ್ಪಲಿನಲ್ಲಿ ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಶ್ರೀಗಳ ಹಿನ್ನೆಲೆ
ಮೇ 3, 1949 ರಲ್ಲಿ ಕಾರ್ಕಳದ ವರಂಗ ಗ್ರಾಮದಲ್ಲಿ ರತ್ನವರ್ಮರಾಗಿ ಜನಿಸಿದ್ದ ಅವರು ಸಂಸ್ಕೃತ, ಪ್ರಾಕೃತ, ಕನ್ನಡದಲ್ಲಿ ಜೈನ ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದರು.
1969 ಡಿ.12 ರಂದು ಸ್ವಾಮೀಜಿಗಳಾಗಿ 1970 ರಲ್ಲಿ ಶ್ರವಣಬೆಳಗೊಳದ ಮಠದ ಪೀಠಾಧಿಪತಿಗಳಾದರು. ಹೊಯ್ಸಳ ವಂಶದಿಂದ ನೀಡಿದ ಚಾರುಕೀರ್ತಿ ಸ್ವಾಮೀಜಿ ಎಂಬ ಪಟ್ಟವನ್ನು ಇವರಿಗೂ ನೀಡಲಾಯಿತು.


ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದಿದೆ.
1981, 1993, 2006 ಹಾಗೂ 2018 ರ ಮಹಾ ಮಸ್ತಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕರವರಿಗೆ ಸಲ್ಲುತ್ತದೆ.
ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿರುವ ಈ ಸ್ವಾಮೀಜಿಯವರು ಎಂಜಿನಿಯರಿAಗ್, ಮೆಡಿಕಲ್ ಪದವಿಗಳಿಗೆ ಕಡಿಮೆ ಫೀಸ್ ಪಡೆದುಕೊಂಡು ಅನೇಕರಿಗೆ ವಿದ್ಯಾಧಾನ ಮಾಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಶ್ರವಣಬೆಳಗೊಳ ಎಂದರೆ ವಿರಾಗಿ ಮೂರ್ತಿಯ ಜೊತೆ ನೆನಪಾಗುವ ಇನ್ನೋರ್ವ ಚೇತನ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪೀಠಕ್ಕೆ ಬಂದು ಅರ್ಧ ಶತಮಾನವೇ ಆಗುತ್ತಿದ್ದರೂ ಅವರೆಂದು ನಕಾರಾತ್ಮಕ ಕಾರಣಕ್ಕೆ ಸುದ್ದಿಯಾದವರಲ್ಲ. ಯಾವುದೇ ಚರ್ಚೆ ಟೀಕೆಗೆ ಗುರಿಯಾದವರಲ್ಲ.

ಟಿವಿ, ಚರ್ಚೆ ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಇವರು ಟಿವಿಯಲ್ಲಿ ಹೆಚ್ಚಾಗಿ ಕಾಣುತ್ತಿದ್ದು ಕೇವಲ ಮಹಾಮಸ್ತಾಕಾಭಿಷೇಕ ಸಂದರ್ಭದಲ್ಲಿ ಮಾತ್ರ. ಮತ್ತೊಮ್ಮೆ ಈ ಸ್ವಾಮೀಜಿಯವರನ್ನು ಹೀಗೆ ಕಾಣಲು ಮತ್ತೆ 12 ವರ್ಷಗಳೇ ಕಾಯಬೇಕಾಗಿರುತ್ತಿತ್ತು. ತಮ್ಮ ವ್ಯಕ್ತಿತ್ವದಿಂದಾಗಿ ವಿರಾಗಿಮೂರ್ತಿಯಂತೆ ಇರುವ ಸ್ವಾಮೀಜಿಯವರಿಗೆ ಹೊರ ರಾಜ್ಯಗಳಲ್ಲಿ ಅಪಾರ ಭಕ್ತ ಗಣವಿದೆ. ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಸ್ವೀಕರಿಸಿ, ಅಲ್ಲಿ ಪ್ರಾಥಮಿಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಸಹಸ್ರಮಾನದ ಮಹಾಮಸ್ತಕಾಭಿಷೇಕದಲ್ಲಿ ಸಾವಿರ ಮಂದಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಿದ್ದಾರೆ. ಆರೋಗ್ಯ, ಶಿಕ್ಷಣಕ್ಕೆ ಮಹತ್ವ ಕೊಡುತ್ತಿದ್ದ ಸ್ವಾಮೀಜಿ, ಶಾಲೆ, ಪಾಲಿಟೆಕ್ನಿಕ್,

ಎಂಜಿನಿಯರಿಂಗ್ ಕಾಲೇಜ್, ರ್ಝೂಂಗ್ ಕಾಲೇಜ್ ಗೋಜಕ ವಿದ್ಯಾಪೀಠ, ಪ್ರಾಕೃತ ಭಾಷೆಯ ಅಭಿವೃದ್ಧಿಗಾಗಿ ಬೆಂಗಳೂರಲ್ಲಿ ‘ಪ್ರಾಕೃತಜ್ಞಾನ ಭಾರತ ಟ್ರಸ್ಟ್ ನಿರ್ಮಿಸಿದ್ದಾರೆ.
ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಶೋಧನ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ, ಪ್ರಾಕೃತ ಗ್ರಂಥಗಳ ಕನ್ನಡ ಅನುವಾದ ಯೋಜನೆ ಕಾರ್ಯ ನಡೆದಿದೆ. ಆಯುರ್ವೇದ ಆಸ್ಪತ್ರೆ, ಸಂಚಾರಿ ಆಸ್ಪತ್ರೆ, ಲ್ಯಾಬ್‌ಗಳನ್ನು ಸ್ಥಾಪಿಸಿರುವ ಸ್ವಾಮೀಜಿ ಹಿಂದಿನ ಮಸ್ತಾಕಾಭಿಷೇಕದಲ್ಲಿ ಉಳಿದ ಹಣದಿಂದ ಮಕ್ಕಳ ಆಧುನಿಕ
ಆಸ್ಪತ್ರೆ ನಿರ್ಮಿಸಿದ್ದರು.
ಹಲವು ದೇಶಗಳಲ್ಲಿ ಜೈನ ಧರ್ಮ ಪ್ರಸಾರ ಮಾಡಿ

ಅಹಿಂಸೆಯ ಸಂದೇಶ ಬಿತ್ತರಿಸಲು ಶ್ರಮಿಸಿದ ಸ್ವಾಮೀಜಿಯವರ ವಿಶೇಷತೆಯೆಂದರೆ, ಅವರು ದೂರವಾಣಿಯಲ್ಲಿ ಅಥವಾ ಮೊಬೈಲ್‌ನಲ್ಲಿ ಮಾತನಾಡುತ್ತಿರಲಿಲ್ಲ. 2001 ರಲ್ಲಿ ಚಾತುರ್ಮಾಸ್ಯ ವಿಜಾಪುರಕ್ಕೆ ತೆರಳಿ ಮರಳಿದ ಬಳಿಕ ಅವರು 12 ವರ್ಷ ಕಾಲ ವಾಹನ ಸಂಚಾರವನ್ನೆ ತ್ಯಜಿಸಿದ್ದರು.
ನಾಲ್ಕು ಮಸ್ತಕಾಭಿಷೇಕದ ನೇತೃತ್ವ.
ಬರೋಬ್ಬರಿ ನಾಲ್ಕು ಮಹಾ ಮಸ್ತಕಾಭಿಷೇಕಗಳನ್ನು ಯಶಸ್ವಿಯಾಗಿ ನಡೆಸಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ಪರಮಪೂಜ್ಯರು, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೂ ವೇದಿಕೆ ಕಲ್ಪಿಸಿದ್ದರು.
ಸದಾ ನಗುಮೊಗದ, ಶಾಂತವಾಗಿದ್ದು ಕೊಂಡೇ ಮೇರು ಸಾಧನೆ ಮಾಡಿದ ಮೌನಸಾಧಕ, ಮಹಾಸಂತರು ಶ್ರವಣಬೆಳಗೊಳ ಎಲ್ಲಾ ರೀತಿಯಲ್ಲೂ ಬೆಳಗಲು ಕಾರಣೀಭೂತರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
ಒಟ್ಟಿನಲ್ಲಿ ಸುಮಾರು ಐದು ದಶಕಗಳ ಕಾಲ ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಜೊತೆಗೆ ಸಾಂಸ್ಕೃತಿಕವಾಗಿಯೂ ಮೇರು ಕೊಡುಗೆ ನೀಡಿದ್ದರು. ಪ್ರಮುಖವಾಗಿ ಜೈನಧರ್ಮ ಹಾಗೂ ಸಾಹಿತ್ಯದ ಪ್ರಚಾರದಲ್ಲಿ ಶ್ರೀಗಳು ಮುತುವರ್ಜಿ ವಹಿಸಿದ್ದರು.

ಹಾಸನ: ಶ್ರವಣಬೆಳಗೊಳ ಜೈನ ಮಠಾಧೀಶ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯರಾದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಸೇರಿ ಎಲ್ಲ ಪದಾಧಿಕಾರಿಗಳು ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಅಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ. ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಗೊಮ್ಮಟನಂತೆಯೇ ಮೇರು ವ್ಯಕ್ತಿತ್ವ ಹೊಂದಿದ್ದ ಸ್ವಾಮೀಜಿ ಪತ್ರಕರ್ತರಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು
ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ಜಿಲ್ಲೆಯ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಸಲ್ಲುತ್ತದೆ, ತಮ್ಮ ಅವಧಿಯುದ್ದಕ್ಕೂ ಎಲ್ಲಾ ಜಾತಿ, ಜನಾಂಗದ ಅಭಿವೃದ್ಧಿಗೆ ಶ್ರಮಿಸಿದರು. ಪತ್ರಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಎಲ್ಲರನ್ನೂ ಸಮಾನವಾಗಿ ಕಾಣುವ ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದರು. ಅವರ ತತ್ವ ಸಿದ್ದಾಂತಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕಿದೆ ಎಂದರು.
ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸ್ವಾಮೀಜಿ ಅಗಲಿಕೆ ಒಂದು ಸಮಾಜಕ್ಕೆ ಮಾತ್ರವಲ್ಲ

ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ನಾಲ್ಕು ಬಾರಿ ಮಹಾ ಮಸ್ತಕಾಭಿಷೇಕ ನೆರವೇರಿಸುವ ಮೂಲಕ ಮಠವನ್ನು ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋದವರು ಎಂದು ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ, ಉಪಾಧ್ಯಕ್ಷರಾದ ನಂಜುಂಡೇಗೌಡ, ವೇಣುಕುಮಾರ್, ಕಾರ್ಯದರ್ಶಿ ನಟರಾಜ್, ಮಾಜಿ ಅಧ್ಯಕ್ಷ ರವಿ ನಾಕಲಗೋಡು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here