ಗರ್ಭಿಣಿಯ ಸಾವಿಗೆ ಕಾರಣವಾದ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುರುಷೋತ್ತಮ್ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ 11 ಲಕ್ಷರೂ. ದಂಡ ವಿಧಿಸಿದೆ.ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಗ್ರಾಮದ ನಿವಾಸಿ ಹೆಚ್.ಎಂ.ಮೋಹನ್ ಕುಮಾರ್ ಅವರು ತಮ್ಮ ಪತ್ನಿಯಾದ ವಿ.ಎಂ.ಆಶಾ ಅವರು ಹೆರಿಗೆ ಪೂರ್ವ ತಪಾಸಣೆಗಾಗಿ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ 2021 ಮಾರ್ಚ್ 26 ರಂದು ಬೆಳಿಗ್ಗೆ 11 ಗಂಟೆಗೆ ತೋರಿಸಲು ಹೋದ ವೇಳೆ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುರುಷೋತ್ತಮ ಅವರು ಸಂಜೆ 4 ಗಂಟೆಗೆ ಬರುವುದಾಗಿ ತಿಳಿಸಿದ್ದಾರೆ. ಸಂಜೆ 4 ಗಂಟೆಗೆ ಡಾ.ಪುರುಷೋತ್ತಮ ಅವರು ಆಶಾ ಅವರನ್ನು ಪರೀಕ್ಷಿಸಿ, ಸ್ಕ್ಯಾನ್ ವರದಿಯ ಅನ್ವಯ ಮಗು ಹೊಟ್ಟೆಯಲ್ಲೇ ಮರಣ ಹೊಂದಿದೆ ಎಂದು ತಿಳಿಸಿದ್ದಾರೆ. ತಕ್ಷಣವೇ ಪತಿ ಮೋಹನ್ ಕುಮಾರ್ ಅವರು ತಮ್ಮ ಪತ್ನಿಯ ಆರೋಗ್ಯದ ದೃಷ್ಟಿಯಿಂದ ಗರ್ಭಪಾತ ಶಸ್ತç ಚಿಕಿತ್ಸೆ ಮಾಡುವಂತೆ ವೈದ್ಯರಲ್ಲಿ ಕೇಳಿಕೊಂಡರೂ ಸಹ, ಡಾ.ಪುರುಷೋತ್ತಮ ಅವರು ಕೋರಿಕೆಯನ್ನು ತಿರಸ್ಕರಿಸಿ, ಶಸ್ತçಚಿಕಿತ್ಸೆಯನ್ನು ಮಾಡದೇ ಒಂದು ಇಂಜೆಕ್ಷನ್ ನೀಡಿದ್ದಾರೆ.
ಅದೇ ದಿನ ರಾತ್ರಿಯೇ ಆಶಾ ಅವರು ತೀವ್ರ ಹೊಟ್ಟೆ ನೋವಿನಿಂದ ನರಳಾಡಿ, ಪಿಡ್ಸ್ ಸ್ಥಿತಿಗೆ ಹೋಗಿದ್ದಾರೆ. ಡಾ.ಪುರುಷೋತ್ತಮ ಮರುದಿನ ಬೆಳಗ್ಗೆ ಬಂದು ಪರೀಕ್ಷಿಸಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದು, ಹಿಮ್ಸ್ ನಲ್ಲಿ ಆಸ್ಪತ್ರೆಯಲ್ಲಿ ಆಶಾ ಅವರಿಗೆ ಗರ್ಭಪಾತ ಆಗಿದ್ದು, ಮಾಚ್ 29ರಂದು ಹೆಚ್ಚಿನ ರಕ್ತಸ್ರಾವವಾದ ಕಾರಣ ಮರಣ ಹೊಂದಿದ್ದಾರೆ.
ಇದಕ್ಕೆಲ್ಲಾ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪುರುಷೋತ್ತಮ ಅವರ ವೈದ್ಯಕೀಯ ನಿರ್ಲಕ್ಷ್ಯತನ, ಸೇವಾನ್ಯೂನತೆ ಎಸಗಿರುತ್ತಾರೆಂದು ಆರೋಪಿಸಿ ಪರಿಹಾರಕ್ಕಾಗಿ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ, ಸಿ.ಸಿ.127/2021ರಡಿ ದೂರನ್ನು 2021 ಮೇ 5ರಂದು ಸಲ್ಲಿಸಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷರಾದ ಸಿ.ಎಂ.ಚಂಚಲ, ಸದಸ್ಯರಾದ ಹೆಚ್.ವಿ.ಮಹಾದೇವ ಹಾಗು ಮಹಿಳಾ ಸದಸ್ಯರಾದ ಆರ್.ಅನುಪಮ ಇವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ಡಾ.ಪುರುಷೋತ್ತಮ ಅವರ ವೈದ್ಯಕೀಯ ನಿರ್ಲಕ್ಷ್ಯ ದಿಂದ ಸೇವಾನ್ಯೂನತೆ ಉಂಟಾಗಿರುತ್ತದೆ ಎಂದು ತೀರ್ಮಾನಿಸಿ, 10 ಲಕ್ಷರೂ.
ದೂರು ದಾಖಲಾದ ದಿನಾಂಕದಿಂದ ಸಾಲಿಯಾನ ಶೇ.9 ರಂತೆ ಬಡ್ಡಿ ಸೇರಿಸಿ ಆರು ವಾರಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ಹಾಗೂ ಫರ‍್ಯಾದಿನ ಖರ್ಚೆಂದು 1 ಲಕ್ಷರೂ. ಒಟ್ಟಾರೆ 11 ಲಕ್ಷರೂ. ರೂ. ದೂರುದಾರ ಮೋಹನ್ ಕುಮಾರ್ ಅವರಿಗೆ ನೀಡಬೇಕೆಂದು ಹಾಗೂ 50 ಸಾವಿರರೂ. ದಂಡವನ್ನು ವೈದ್ಯಕೀಯ ವರದಿಯಲ್ಲಿ ಕೆಟ್ಟ ಬರವಣಿಗೆಯಲ್ಲಿ ನಮೂದು ಮಾಡಿರುವ ಕಾರಣ ಗ್ರಾಹಕ ಸಂರಕ್ಷಣಾ ನಿಧಿಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಒಟ್ಟ ಮೊತ್ತಗಳ ಮೇಲೆ ಸಾಲಿಯಾನ ಶೇಕಡ 10 ಬಡ್ಡಿಯೊಂದಿಗೆ ಡಾ.ಪುರುಷೋತ್ತಮ ಅವರು ಪಾವತಿಸುವಂತೆ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷರಾದ ಸಿ.ಎಂ. ಚಂಚಲ ಅವರು ತೀರ್ಪು ನೀಡಿದ್ದಾರೆ