ಹಾಸನ: ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಗೆ ಕಾರಿನಿಂದ ಡಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣನಾಗಿದ್ದ ಆರೋಪಿಯನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಬೊಮ್ಮನಾಯಕನಹಳ್ಳಿಯ ಭರತ್ ಜಿ.ಆರ್. ಬಂಧಿತ ಆರೋಪಿ.
ಅರಸೀಕೆರೆ ಮೂಲದ ಶರಣ್ಯ, ನನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಕಲೆದ ಆ.3 ರಂದು ಕಾರಿನಿಂದ ಗುದ್ದಿ ಕೊಲೆಗೆ ಯತ್ನಿಸಿದ್ದ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಶರಣ್ಯ ಮೃತಪಟ್ಟಿದ್ದಳು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಆ.12 ರಂದು ಸಕಲೇಶಪುರ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಹಾಸನ: ‘ಪ್ರೀತಿಸಲು ಒಪ್ಪದ ಯುವತಿಯ ಮೇಲೆ ನಗರದ ಭೂವನಹಳ್ಳಿ ಬೈಪಾಸ್ ಬಳಿ ಕಾರು ಡಿಕ್ಕಿ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ’ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಗುರುವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ‘ಭರತ್ (24) ಬಂಧಿತ ಆರೋಪಿ. ಸಮೀಪದ ಬೊಮ್ಮನಾಯಕನಹಳ್ಳಿಯ ಈತ, ಅರಸೀಕೆರೆಯ ಶರಣ್ಯ ಎಂಬಾಕೆಯನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಆಕೆ ಮತ್ತು ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆಕೆ ನಗರದ ಭಾರತಿ ಕಾಫಿ ಕ್ಯೂರಿಂಗ್‌ಗೆ ಕೆಲಸಕ್ಕೆ ಬರುವ ವೇಳೆ ಆಗಸ್ಟ್ 2ರಂದು ಕಾರು ಡಿಕ್ಕಿ ಹೊಡೆಸಿದ್ದ. ಬಳಿಕ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಸಿ, ಇದೊಂದು ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದ. ಕಾರು ಸ್ಥಗಿತಗೊಂಡಿದ್ದರಿಂದ ಅದನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ’ ಎಂದು ವಿವರಿಸಿದರು.
‘ಈ ಪ್ರಕರಣದ ಬಳಿಕ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ಎಂದು ದಾಖಲಿಸಿಕೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶರಣ್ಯ ಆಗಸ್ಟ್ 4 ರಂದು ಮೃತಪಟ್ಟಿದ್ದರು. ಪ್ರಕರಣದ ಬಗ್ಗೆ ಯುವತಿ ಅಣ್ಣ ಸಚಿನ್ ಸಂಶಯ ವ್ಯಕ್ತಪಡಿಸಿದ್ದರಿಂದ, ಕಾರಿನ ಜಿಪಿಎಸ್ ಹಾಗೂ ಸಿಸಿಟಿವಿ ಕ್ಯಾಮೆರಾ ಮೂಲಕ ಹೆಚ್ಚಿನ ತನಿಖೆ ಮಾಡಲಾಗಿದ್ದು, ಆರೋಪಿ ಭರತ್ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತು’ ಎಂದು ತಿಳಿಸಿದರು.
‘ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ಆ.12 ರಂದು ಸಕಲೇಶಪುರದಲ್ಲಿ ಆರೋಪಿಯನ್ನು ಬಂಧಿಸಿದೆ’ ಎಂದು ಎಸ್ಪಿ ಹರಿರಾಂ ಶಂಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.