ರಾಮನಾಥಪುರ: ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿ ವಹ್ನಿಪುಷ್ಕರಿಣಿಯಲ್ಲಿ ಎಚ್.ಎಸ್.ದೊರೆಸ್ವಾಮಿ ಅವರ ಚಿತಾಭಸ್ಮಕ್ಕೆ ಕಾವೇರಿ ಜಲ ಪ್ರೋಕ್ಷಣೆ ಮಾಡಿ, ತೆಂಗಿನ ಗಿಡದ ಬುಡದಲ್ಲಿ ಚಿತಾಭಸ್ಮವನ್ನು ಅರ್ಪಿಸಲಾಯಿತು.
‘ಹೋರಾಟಗಾರರ ಒತ್ತಾಯದ ಮೇರೆಗೆ ಈ ಕಾರ್ಯ ಮಾಡಿದ್ದೇನೆ. ಚಿತಾಭಸ್ಮವನ್ನು ಜಲಮೂಲಗಳಿಗೆ ಬಿಟ್ಟು ಕಲುಷಿತಗೊಳಿಸಬಾರದು ಎಂಬ ಉದ್ದೇಶದಿಂದ, ಚಿತಾಭಸ್ಮಕ್ಕೆ ಕಾವೇರಿ ನೀರನ್ನು ಪ್ರೋಕ್ಷಿಸಿ ತೆಂಗಿನ ಗಿಡ ಬುಡದಲ್ಲಿ ಮಣ್ಣು ಮಾಡಲಾಯಿತು’ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ ಸಣ್ಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್, ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್, ವಲಯ ಅರಣ್ಯಾಧಿಕಾರಿ ಅರುಣ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಜನಾರ್ದನ ಗುಪ್ತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಕಂದಾಯ ನಿರೀಕ್ಷಕ ಸಿ.ಸ್ವಾಮಿ ಇದ್ದರು.
ನಂತರ ಮಾತನಾಡಿದ ರಾಮಸ್ವಾಮಿ, ‘ದೊರೆಸ್ವಾಮಿ ಅವರು ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಅನೇಕ ಹುದ್ದೆಗಳ ಅವಕಾಶ ಬಂದಾಗಲೂ ಅವೆಲ್ಲವನ್ನೂ ನಿಸ್ವಾರ್ಥದಿಂದ ತೊರೆದು ಎಲ್ಲಾ ಆಡಳಿತಗಳ ವಿರುದ್ಧ ಸಮಾಜದ ಸ್ವಾಸ್ಥ್ಯಕ್ಕಾಗಿ ಹೋರಾಟ ಮಾಡಿದರು. ಅನ್ಯಾಯಕ್ಕೆ ಒಳಗಾದವರು, ನೊಂದವರ ನೆರವಿಗೆ ಧಾವಿಸಿ, ಹೋರಾಟಕ್ಕಿಳಿಯುತ್ತಿದ್ದರು. ಅಣ್ಣಾ ಹಜಾರೆ ನೇತೃತ್ವದ ಲೋಕಪಾಲ್ ಮಸೂದೆ ಜಾರಿಗೆ ತರುವ ಹೋರಾಟ ಸೇರಿದಂತೆ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು’ ಎಂದರು.
ಚಳವಳಿಯ ಸಂದರ್ಭ ದೊರೆಸ್ವಾಮಿ ಅವರು, ‘ನೀವು ನನ್ನ ಉತ್ತರಾಧಿಕಾರಿಯಾಗಬೇಕು’ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡ ರಾಮಸ್ವಾಮಿ, ‘ನಾನು ನಿಮ್ಮ ಕುಟುಂಬದ ಉತ್ತರಾಧಿಕಾರಿಯಾಗಲು ಸಾಧ್ಯವಿಲ್ಲ’ ಎಂದು ಹೇಳಿದೆ. ಆಗ, ಅವರು, ‘ತಮ್ಮ ಆಶಯಗಳಿಗೆ ಉತ್ತರಾಧಿಕಾರಿಯಾಗುವಂತೆ ಕೇಳಿಕೊಂಡಿದ್ದರು’ ಎಂದು ದೊರೆಸ್ವಾಮಿ ಅವರೊಂದಿಗೆ ಒಡನಾಟವನ್ನು ಸ್ಮರಿಸಿದರು.