ಮೊದಲ ಹಂತದ ಚುನಾವಣಾ ಕಣದಲ್ಲಿ ಹಾಸನ ಜಿಲ್ಲೆಯಲ್ಲಿ ಸ್ಪರ್ಧಿಗಳು ಎಷ್ಟು ?? ಹಾಸನದಲ್ಲಿ ಚುನಾವಣೆಯನ್ನು ಬಹಿಷ್ಕಾರ ಮಾಡಿರೋ ಊರುಗಳಾವುವು ಗೊತ್ತಾ??

0

ಮೊದಲ ಹಂತದ ಚುನಾವಣಾ ಕಣದಲ್ಲಿ 3867 ಅಭ್ಯರ್ಥಿಗಳು

ಹಾಸನ ಡಿ.15(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ತಾಲ್ಲೂಕುಗಳ 125 ಗ್ರಾಮ ಪಂಚಾಯಿತಿಗಳ 1703 ಸದಸ್ಯ ಸ್ಥಾನಕ್ಕೆ ಒಟ್ಟಾರೆ 3867 ಮಂದಿ ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ .
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಹಾಸನ ಸಕಲೇಶಪುರ, ಅರಕಲಗೂಡು ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ 34 ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ 197 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಚುನಾವಣೆ ನಡೆಯಲಿರುವ 1472 ಸದಸ್ಯ ಸ್ಥಾನಗಳಿಗೆ 3867 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದರು.
ಅನುಸೂಚಿತ ಜಾತಿಯ 462 ಮಹಿಳಾ ಅಭ್ಯರ್ಥಿಗಳು ಹಾಗೂ 364 ಸಾಮಾನ್ಯ ಅಭ್ಯರ್ಥಿಗಳು, ಅನುಸೂಚಿತ ಪಂಗಡದ ಇಬ್ಬರು ಸಾಮಾನ್ಯ ಹಾಗೂ 186 ಮಹಿಳಾ ಅಭ್ಯರ್ಥಿಗಳು ,ಹಿಂದುಳಿದ ‘ಅ’ ವರ್ಗದ 203 ಸಾಮಾನ್ಯ ಮತ್ತು 318 ಮಹಿಳಾ ಅಭ್ಯರ್ಥಿಗಳು ಹಿಂದುಳಿದ ‘ಬಿ’ ವರ್ಗದ 80 ಸಾಮಾನ್ಯ ಹಾಗೂ 83 ಮಹಿಳಾ ಅಭ್ಯರ್ಥಿಗಳು,ಸಾಮಾನ್ಯ ವರ್ಗದಲ್ಲಿ 809 ಮಹಿಳಾ ಮತ್ತು 1360 ಸಾಮಾನ್ಯ ಅಭ್ಯರ್ಥಿಗಳು ಸೇರಿದಂತೆ 2009 ಸಾಮಾನ್ಯ ಹಾಗೂ 1858 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 3867 ಸ್ಪರ್ಧಿಗಳು ಅಂತಿಮವಾಗಿ ಸ್ವರ್ಧೆಯಲ್ಲಿ ಉಳಿದಿದ್ದಾರೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ಹೆತ್ತೂರು, ಹೆಗ್ಗದ್ದೆ,ಹೊಂಗಡಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ನಾಮಪತ್ರ ಸ್ವೀಕೃತವಾಗಿಲ್ಲ. ಹಾನುಬಾಳು ಹೋಬಳಿಯ ದೇವಾಲಕೆರೆ ಗ್ರಾಮ ಪಂಚಾಯಿತಿಯಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದ ಡಿ. 14ರಂದು 8 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದು ಎಲ್ಲಾ ನಾಮ ಪತ್ರಗಳನ್ನು ಹಿಂಪಡೆದ ಕಾರಣ 7 ಸ್ಥಾನಗಳು ಖಾಲಿ ಉಳಿದಿವೆ
ಇದೇ ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮ ಪಂಚಾಯಿತಿಯ ಒಂದು ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ಒಂದು ನಾಮಪತ್ರವನ್ನು ಡಿ.14ರಂದು ಹಿಂಪಡೆಯಲಾಗಿರುವ ಕಾರಣ ಒಂದು ಸ್ಥಾನ ಖಾಲಿ ಉಳಿದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಕಸ್ತೂರಿ ರಂಗನ್ ವರದಿ ಜಾರಿಯು ಸ್ಥಳೀಯರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ದೊಡ್ಡಮಟ್ಟದ ಗಣಿಗಾರಿಕೆ ಕೈಗಾರಿಕೆ, ಬೃಹತ್ ಕಟ್ಟಡ ನಿರ್ಮಾಣ ಮಾತ್ರ ನಿರ್ಬಂದಿಸಿದೆ ಇತರ ಯಾವುದೇ ಚಟುವಟಿಕೆಗಳಿಗೆ ಅಡ್ಡಿ ಇರುವುದಿಲ್ಲ. ಸ್ಥಳೀಯರಿಗೆ ಈ ಬಗ್ಗೆ ಅರಿವು ಮೂಡಿಸಿ ನಾಮಪತ್ರ ಸಲ್ಲಿಸುವಂತೆ ಕೋರಿದ್ದರೂ ಸಹ ಯಾರು ಮುಂದೆ ಬಂದಿಲ್ಲ ಎಂದು ಅವರು ವಿವರ ಒದಗಿಸಿದರು. ಎರಡನೆ ಹಂತದಲ್ಲಿ ಚುನಾವಣೆ ನಡೆಯುವ ಅರಸೀಕೆರೆ,ಬೇಲೂರು,ಆಲೂರು ಹಾಗೂ ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಒಟ್ಟು 1648 ಸ್ಥಾನಗಳಿಗೆ ಡಿ. 14 ರ ಅಂತ್ಯಕ್ಕೆ ಒಟ್ಟು 2513 ನಾಮಪತ್ರಗಳನ್ನು ಸ್ವೀಕರಿಸಲಾಗಿರುತ್ತದೆ ಡಿ.16 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ. 1993ರ ಪ್ರಕರಣ 308 ಎ ಸಿ ರಂತೆ ಮತದಾನ ಮುಕ್ತಾಯಕ್ಕೆ 48 ಗಂಟೆಗಳ ಮುಂಚೆ ನೀತಿಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು ,ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸಬೇಕು. ಅರಕಲಗೂಡು ತಾಲ್ಲೂಕಿನ ಸ್ಥಾನಗಳಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಕುರಿತು ದೂರು ಸ್ವೀಕೃತ ಗೊಂಡ ಹಿನ್ನೆಲೆಯಲ್ಲಿ ಎಫ್.ಐ.ಆರ್.ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ ಭಾರತಿ ಅವರು ಮಾತನಾಡಿ ಜಿಲ್ಲೆಯಲ್ಲಿ ಮತದಾರರ ಜಾಗೃತಿ ಹಾಗೂ ಕೋವಿಡ್-19 ಜಾಗೃತಿಗಾಗಿ ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಆಟೋ ಮೂಲಕವು ಪ್ರಚಾರ ಮಾಡಲಾಗುತ್ತದೆ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್ಸುಗಳಿಗೆ ಪೋಸ್ಟರ್‍ಗಳನ್ನು ಅಂಟಿಸಿ ಚುನಾವಣೆ ಹಾಗೂ ಕೊವಿಡ್ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಸರ್ಕಾರಿ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳು

ಗ್ರಾಮ ಪಂಚಾಯಿತಿ ಮತ್ತು ನಾಡಕಚೇರಿಗಳಲ್ಲಿ ಪೋಸ್ಟರ್ ಅಳವಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಹಾಗೂ ಮತ್ತಿತ್ತರರು ಹಾಜರಿದ್ದರು.

LEAVE A REPLY

Please enter your comment!
Please enter your name here