ಮನೆ ಹಂಚಿಕೆಯಲ್ಲಿ ಶಾಸಕರಿಂದ ತಾರತಮ್ಯ: ಕಾಂಗ್ರೆಸ್ ಆರೋಪ | ಸುಳ್ಳು ಆರೋಪಕ್ಕೆ ಬಾಲಕೃಷ್ಣ ಖಂಡನೆ

0

ಚನ್ನರಾಯಪಟ್ಟಣ: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನ ಕೆಲವರು ನನ್ನ ಮೇಲೆ
ಇಲ್ಲ ಸಲ್ಲದ ಅಪಪ್ರಚಾರ ಮಾಡಿರುವುದು ಖಂಡನೀಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾನು ಶಾಸಕನಾಗಿ 10 ವರ್ಷ ಆಗಿದೆ. ನನ್ನ ಅವಧಿಯಲ್ಲಿ ಜೆಡಿಎಸ್ ಸರಕಾರ 14 ತಿಂಗಳು ಮಾತ್ರ ಅಧಿಕಾರದಲ್ಲಿತ್ತು. ಆದರೂ ನಾನು ಗುಮಾಸ್ತನಂತೆ ಫೈಲ್ ಹಿಡಿದುಕೊಂಡು ಯಾವ ಯಾವ ಮಿನಿಸ್ಟರ್‌ಗಳನ್ನು ಭೇಟಿ ಮಾಡಿ, ನಮ್ಮ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ನನಗೆ, ಕ್ಷೇತ್ರದ ಜನರಿಗೆ ಗೊತ್ತು ಎಂದರು.


ಶ್ರವಣಬೆಳಗೊಳವನ್ನು ಐಕಾನ್ ಸಿಟಿ ಯೋಜನೆಗೆ ಸೇರಿಸಲಾಗಿದೆ. ಅದರಿಂದ 35 ಕೋಟಿ ಅಂತಾರಾಷ್ಟಿಯ ಪ್ರವಾಸಿ ಮಂದಿರ ಮಾಡಲು ಅನುದಾನ ಬಿಡುಗಡೆ ಆಗಿದೆ ಎಂದು ತಿಳಿಸಿದರು.
ಡೇರಿಯಿಂದ ರೈತರ ಖಾತೆಗೆ ಸುಮಾರು 25 ಕೋಟಿ ಹಣ ಪ್ರತಿ ತಿಂಗಳಿಗೆ ಹೋಗುತ್ತಿದೆ ಮತ್ತು ಸಹಕಾರ ಸೊಸೈಟಿಯಿಂದ 3000 ರೈತರಿಗೆ ಸಾಲ ಇರುವುದನ್ನು ಈಗ 40 ಸಾವಿರ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.


ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವಿಕೆ ಸಾಮರ್ಥ್ಯ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಉಪಯೋಗವಾಗುತ್ತಿದೆ. ಕೃಷಿ, ನೀರಾವರಿ ಮತ್ತು ಆಸ್ಪತ್ರೆಗಳಿಗೆ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ.
ಪುರಸಭೆ ಮುಂದಿನ ದಿನಗಳಲ್ಲಿ ನಗರ ಸಭೆ ಆಗಲಿದೆ. ಶಾಸಕನಾಗಿ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ಕ್ಷೇತ್ರದ ಮತದಾರರೇ ಮುಂದಿನ ದಿನಗಳಲ್ಲಿ ಗುರುತಿಸುತ್ತಾರೆ. ನಮ್ಮ ಅಭಿವೃದ್ಧಿ ನೋಡಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಹತ್ತಿರ ಬರುತ್ತಿದ್ದಾರೆ. ಆದರೂ

ಕೆಲವರು ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ತಾಲೂಕಿನಲ್ಲಿ ಉತ್ತಮ ಮಳೆಯಿಂದ ಅಂತರ್ಜಲ ವೃದ್ಧಿಯಾಗಿದೆ ಎಂದರು.
ಈ ವೇಳೆ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಪುರಸಭೆ ಮಾಜಿ ಅಧ್ಯಕ್ಷ ನವೀನ್ ಸುರೇಶ್, ಸಿ.ಟಿ.ಅಶೋಕ್, ತಾಲೂಕು ಕಸಾಪ ಅಧ್ಯಕ್ಷ ಹೆಚ್.ಎನ್. ಲೋಕೇಶ್, ಎಪಿಎಂಸಿ ಅಧ್ಯಕ್ಷ ಕುಂಬೇನಹಳ್ಳಿ ರಮೇಶ್, ಪುಟ್ಟಸ್ವಾಮಿ, ಆರ್‌ಎಂಸಿ ಮಾಜಿ ಅಧ್ಯಕ್ಷ ಮಂಜೇಗೌಡ, ನಿರ್ದೇಶಕ ಅನಿಲ್ ಮೊದಲಾದವರಿದ್ದರು.


ಅಕ್ರಮ ನಡೆದಿಲ್ಲ:
ಬಸವ ಯೋಜನೆ ಅಡಿ 1400 ಮನೆಗಳು ಬಂದಿದ್ದು, ಅವುಗಳನ್ನು ಪಂಚಾಯಿತಿ ಪಿಡಿಒ ಮೂಲಕ ಹಂಚಿಕೆ ಮಾಡಲಾಗಿದೆ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಏನದು ಆರೋಪ ?

ಮನೆ ಹಂಚಿಕೆಯಲ್ಲಿ ಶಾಸಕರಿಂದ ತಾರತಮ್ಯ: ಕಾಂಗ್ರೆಸ್ ಆರೋಪ

ಚನ್ನರಾಯಪಟ್ಟಣ: ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಬಸವ ವಸತಿ ಯೋಜನೆಯಡಿ ಸರ್ಕಾರದಿಂದ ತಾಲೂಕಿಗೆ ಬಂದಿರುವ 1400 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸದೆ, ತಮ್ಮ ಹಿಂಬಾಲಕರಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಗ್ರಾಮ ಸಭೆಗಳಲ್ಲಿ ಮನೆ ಹಂಚಿಕೆ ಫಲಾನುಭವಿಗಳನ್ನು ಆಯ್ಕೆ ಮಾಡದೆ, ಸೆ.30 ರಂದು ಕಡೆಯ ದಿನವಾಗಿದ್ದರೂ, ಗಾಂಧಿ ಜಯಂತಿಯಂದು ಗ್ರಾಮ ಸಭೆ ನಡೆಸುತ್ತಿರುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಫೋಟೋ ತೆಗೆದು ವರದಿ ಕಳಿಸಿದ್ದಾರೆ ಎಂದು ಆರೋಪಿಸಿದರು.


ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸದೆ ಇದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಕೂಡಲೇ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ನಡೆಯುತ್ತಿರುವ ಅವ್ಯವಹಾರ, ಜನರಿಗೆ ಆಗುತ್ತಿರುವ ಅನ್ಯಾಯಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.


ಅ.7 ರಂದು ಭಾರತ್ ಜೋಡೋ ಯಾತ್ರಗೆ ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಬೆಳ್ಳೂರು ವೃತ್ತದವರೆಗೆ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಲು ತಾಲೂಕಿನಿಂದ ಅತಿ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಹೊರಡಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ಮಾತನಾಡಿ, ತಾಲೂಕಿನಲ್ಲಿ ಕಟ್ಟ ಕಡೆಯ ಕಾಂಗ್ರೆಸ್ ಕಾರ್ಯಕರ್ತ ನಿಂತರೂ ಕೂಡ ಈ ಬಾರಿ ಬಾಲಕೃಷ್ಣ ಅವರ ವಿರುದ್ಧ ಗೆಲ್ಲುವುದು ಖಚಿತ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ ಶಾಸಕರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸುವುದರಲ್ಲಿ ಅವ್ಯವಹಾರ ಎಸಗಿದ್ದಾರೆ. ತಾಲೂಕಿನ ತೋಟಗಾರಿಕೆ ಇಲಾಖೆ, ತಾಲೂಕು ಕಚೇರಿ, ಸರ್ವೆ ಇಲಾಖೆ ಹಾಗೂ

ಹೇಮಾವತಿ ಟೆಂಡರ್ ವಿಚಾರದಲ್ಲೂ ಅವ್ಯವಹಾರ ನಡೆಸಿದ್ದು, ರೈತರು ಒಂದು ಪಹಣಿ ತೆಗೆದುಕೊಳ್ಳಲೂ ಆಗುತ್ತಿಲ್ಲ. ರಾಜ್ಯದ ಮೊದಲ ಕಡು ಭ್ರಷ್ಟರ ಸಾಲಿನಲ್ಲಿ ಈ ಶಾಸಕರೂ ಸೇರಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್.ವಿಜಯ್ ಕುಮಾರ್, ಎಂ.ಶಂಕರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಇತರರು ಸುದ್ದಿಗೋಷ್ಟಿಯಲ್ಲಿದ್ದರು.

LEAVE A REPLY

Please enter your comment!
Please enter your name here