ಹಾಸನ ಜಿಲ್ಲೆಯ ಹಲವು ದಶಕಗಳ ವಿಮಾನ ನಿಲ್ದಾಣ ಪ್ರಾರಂಭದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಶೀಘ್ರವೇ ಕಾಮಗಾರಿ ಚಾಲನೆ ಯಾಗಲಿದೆ. ನಾಳೆಯಿಂದಲೇ ಮಾರ್ಕಿಂಗ್ ಕಾರ್ಯ ಪ್ರಾರಂಬಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ವಿಮಾನ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಕಾಲಮಿತಿಯೊಳಗೆ ಗುಣಮಟ್ಟ ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರದ ಹೊರವಲಯದ ಬೂವನಹಳ್ಳಿ ಬಳಿ ಸ್ಥಾಪಿಸಲು ಉದ್ದೇಶಿತವಾದ ವಿಮಾನ ನಿಲ್ದಾಣದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದ್ದು, ಯಾವುದೇ ರೀತಿಯ ವಿಳಂಬವಾಗದಂತೆ ಕೆಲಸಪ್ರಾರಂಬಿಸುವಂತೆ ನಿರ್ದೇಶನ ನೀಡಿದರು.
ವಿಮಾನ ನಿಲ್ದಾಣ ಕಾಮಗಾರಿಗೆ ಅನುಕೂಲವಾಗುವಂತೆ ತ್ವರಿತವಾಗಿ ವಿದ್ಯುತ್ ಟವರ್‍ಗಳ ಸ್ಥಳಾಂತರ ಕಾರ್ಯ ಪೂರ್ಣಗೊಳಿಸಿ ಈ ಸಂಧರ್ಭದಲ್ಲಿ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಕೆ.ಪಿ.ಟಿಸಿ.ಎಲ್., ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಮಗಾರಿ ಶಿಲಾನ್ಯಾಸಕ್ಕೆ ಶಿಷ್ಠಾಚಾರದ ಪ್ರಕಾರ ಅತಿಥಿ ಗಣ್ಯರನ್ನು ಅಹ್ವಾನಿಸಬೇಕಾಗುತ್ತದೆ. ಪ್ರಾಥಮಿಕ ಹಂತದ ನಿಧಿ ಕಾರ್ಯವನ್ನು ಆದಷ್ಟು ಬೇಗ ಚುರುಕುಗೊಳಿಸಿ ಎಂದು ಆರ್.ಗಿರೀಶ್ ಹೇಳಿದರು.
ಕೆ.ಪಿ.ಟಿ.ಸಿ.ಎಲ್. ಸೂಪರ್‍ಡೆಂಟ್ ಇಂಜಿನಿಯರ್ ಉಮೇಶ್, ಅವರು ಮಾತನಾಡಿ ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಪ್ರದೇಶದಲ್ಲಿ 9 ಕಿ.ಮೀ. ಮಾರ್ಗದಲ್ಲಿ 35 ಮೀಟರ್ ವಿಸ್ತೀರ್ಣದ ಹೈಟೆನ್ಷನ್ ತಂತಿಗಳನ್ನು ಹಾಗೂ ಟವರ್‍ಗಳನ್ನು ತೆಗೆದು 17 ಕಿ.ಮೀ. ದೂರದಿಂದ ವಿದ್ಯುತ್ ಸಂಪರ್ಕ ವಿಸ್ತರಿಸಬೇಕಾಗಿದೆ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು 68 ಟವರ್ ಗಳ ಪೈಕಿ 66 ಟವರ್‍ಗಳನ್ನು ಹಾಕಲಾಗಿದ್ದು 9 ಕಿ.ಮೀ ತಂತಿಗಳನ್ನು ಎಳೆಯಲಾಗಿದೆ ಇನ್ನೂ 2ಟವರ್ ಹಾಗೂ 8 ಕಿ.ಮೀ ತಂತಿಗಳನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು 19 ಕೋಟಿ ರೂ ವೆಚ್ಚವನ್ನು ಮೂಲಭೂತ ಸೌಕರ್ಯ ಇಲಾಖೆಯಿಂದ ಒದಗಿಸಿ ಕೊಡಬೇಕಾಗಿದ್ದು, ಭೂ ಪರಿಹಾರಧನವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದರು.
ಉದ್ದೇಶಿತ ಪ್ರದೇಶದ ವಿದ್ಯುತ್ ಲೈನ್‍ಅನ್ನು ಸ್ಥಳಾಂತರಿಸಲು 7.3ಕೋಟಿ ಭೂ ಪರಿಹಾರಧನ ಸೇರಿ 19.7 ಕೋಟಿ ರೂ ಬಿಡುಗಡೆ ಮಾಡಿಕೊಡುವಂತೆ ಕೋರಲಾಗಿದ್ದು, ಒಟ್ಟಾರೆಯಾಗಿ 34 ಎಕರೆ ಭೂ ಪ್ರದೇಶ ಇದ್ದು ಪರಿಹಾರ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾ ರಾಂ. ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ಚೆಸ್ಕಾಮ ಅಧಿಕ್ಷಕ ಇಂಜಿನೀಯರ್ ಅಣ್ಣೇಗೌಡ, ಕಾರ್ಯವಾಹಕ ಅಭಿಯಂತರರಾದ ಅರ್ಜುನ್, ಕೆ.ಪಿ.ಟಿ.ಸಿ.ಎಲ್ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ನಾಗಾರ್ಜುನ್, ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೆಶ್, ತಹಶೀಲ್ದಾರ್ ನಟೇಶ್, ಕೆ.ಪಿ.ಟಿ.ಸಿ.ಎಲ್ ಸಹಾಯಕ ಅಭಿಯಂತರರಾದ ಕರುಣಾಕರ್ ಹಾಗೂ ಮತ್ತಿತರರು ಹಾಜರಿದ್ದರು.
ಸಭೆಯ ನಂತರ ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ತಹಶೀಲ್ದಾರ್ ನಟೇಶ್, ಕಂದಾಯ ಇಲಾಖೆಯ ಚೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು, ಹಾಗೂ ವಿಮಾನ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಪ್ರತಿನಿಧಿಗಳು ಭೂವನಹಳ್ಳಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.