ಹಾಸನ ದೇಶದ ವಿವಿದ ಕಡೆ ಬ್ಲಾಕ್ ಫಂಗಸ್ ಸೋಂಕು ಅಲ್ಲಲ್ಲಿ ಕಂಡು ಬರುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ತ್ರಿಲೋಕ್ ಚಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಬ್ಲಾಕ್ ಫಂಗಸ್ ನಿವಾರಣೆಗೆ ಸೂಕ್ತ ಕ್ರಮವಹಿಸಿ ಈ ರೋಗಕ್ಕೆ ಒಳಗಾದವರನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಿದೆ ಆಯಾ ಜಿಲ್ಲೆಗಳಲ್ಲೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಶೀತ ಹಾಗೂ ಕೆಮ್ಮು ಈ ಸೋಂಕಿನ ಮುಖ್ಯಲಕ್ಷಣಗಳಾಗಿವೆ ಹಲವು ಸೋಂಕಿತರು ಗುಣಮುಖರಾಗುತ್ತಿದ್ದಾರೆ ಕೆಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಆತಂಕಪಡುವ ಅಗತ್ಯವಿಲ್ಲ ಆದರೆ ಗರಿಷ್ಠ ಮುಂಜಾಗ್ರತವಹಿಸಿ ಸ್ಟಿರಾಯ್ಡ್‍ಗಳನ್ನು ಡಯಾಬಿಟಿಸ್ ಹಾಗೂ ಅತಿಯಾದ ಅನಾರೋಗ್ಯಕ್ಕೆ ಒಳಗಾದವರಿಗೆ ನೀಡುವುದನ್ನು ತಪ್ಪಿಸಿ ಎಂದರು.
ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹೆಚ್ಚಿನ ಕೋವಿಡ್ ಸಾವಿಗೆ ಕಾರಣವಾಗಿದ್ದು ಚಿಕಿತ್ಸಾ ಸೌಲಭ್ಯವನ್ನು ಉತ್ತಮಗೊಳಿಸಿ ಹಾಗೂ ವೈದ್ಯರು ಮತ್ತು ನರ್ಸ್ ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಿದರು.
ತೀವ್ರ ತುರ್ತು ನಿಗಾ ಘಟಕಕ್ಕೆ ಅನುಭವ ಇರುವಂತಹ ಸ್ಟಾಫ್‍ನರ್ಸ್‍ಗಳನ್ನು ನೇಮಕ ಮಾಡಿ ಆಸ್ಪತ್ರೆಯನ್ನು ಹಾಗೂ ಬೆಡ್‍ಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದರು.
ವಿಡಿಯೋ ಸಂವಾದದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಡಾ|| ಸುಜನ್, ಡಾ|| ಶಶಿಭೂಷಣ್, ಡಾ|| ಪ್ರದೀಪ್ ಅವರು ಜಿಲ್ಲೆಯ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಉತ್ತರಿಸುವ ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಹಾಗೂ ಮತ್ತಿತರರು ಹಾಜರಿದ್ದರು.