ಹಾಸನ: ಮಳೆ ಹಾನಿ; ಪರಿಹಾರ ಬಿಡುಗಡೆಗೆ ಒತ್ತಾಯ: ರೇವಣ್ಣ

0

ಹಾಸನ: ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಹಲವು ಮನೆಗಳು ಕುಸಿದು ಬಿದ್ದಿವೆ. ಕೂಡಲೇ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.

ಅತಿವೃಷ್ಟಿಯಿಂದ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ಗುಡಿಸಲಿನಲ್ಲಿ ವಾಸ ಮಾಡುವಂತಾಗಿದೆ. ಕೆರೆ, ಕಟ್ಟೆಗಳು ಒಡೆದಿವೆ. ಶಾಲಾ, ಕಾಲೇಜು, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಆರು ಕೋಟಿ ರೂಪಾಯಿ ನಷ್ಟವಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಪರಿಹಾರ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.

ಮೂರನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಎರಡನೇ ಅಲೆಯಲ್ಲಿ ಸಾಕಷ್ಟು ಸಾವು, ನೋವು ಸಂಭವಿಸಿದೆ. ಮಕ್ಕಳ ವಾರ್ಡ್ ಸಿದ್ಧಗೊಳಿಸಬೇಕು. ಎಸ್‌ಡಿಆರ್‌ಎಫ್ ಅಡಿ ಕೆ 20 ಕೋಟಿ ಅನುದಾನ ನೀಡಬೇಕು ಎಂದರು.

ಹಾಸನ-ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗಕ್ಕೆ ಭೂ ಸ್ವಾಧೀನ ತ್ವರಿತಗೊಳಿಸಬೇಕು. ಯಡೇಗೌಡನಹಳ್ಳಿ-ಬಿಳಿಕೆರೆ ಹಾಗೂ ಚನ್ನರಾಯಪಟ್ಟಣ-ಮಾಕುಟ್ಟ ರಸ್ತೆ ಕಾಮಗಾರಿಗೆ ವೇಗ ನೀಡಬೇಕು. ಈ ಸಂಬಂಧ ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ವಿವರಿಸಿದರು.

ನಗರದ ಹೊರ ವಲಯ ಕೈಗಾರಿಕಾಭಿವೃದ್ಧಿ ಕೇಂದ್ರಕ್ಕೆ ಹೊಂದಿಕೊಂಡಂತೆ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ) ಸ್ಥಾಪನೆಗೆ ಸ್ವಾಧೀನಪಡಿಸಿಕೊಂಡಿದ್ದ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಬಡಾವಣೆಗಳನ್ನು ತಾಕತ್ತಿದ್ದರೆ ಜಿಲ್ಲಾಧಿಕಾರಿ ತಡೆಯಲಿ, ಹುಡಾ, ಗೃಹ ಮಂಡಳಿ ವತಿಯಿಂದ ಭೂಮಿ ಸ್ವಾಧೀನಪಡಿಸಿಕೊಂಡು, ಪರಿಹಾರ ನೀಡಬೇಕು ಎಂದು ಸಲಹೆ ನೀಡಿದರು.

ಉಡಾನ್ ಯೋಜನೆಯಲ್ಲಿ ಹಾಸನದಲ್ಲಿ ವಿಮಾಣ ನಿಲ್ದಾಣ ನಿರ್ಮಾಣಗೊಂಡರೆ ರೈತರು ಬೆಳೆದ ಬೆಳೆಗಳನ್ನು ವಿದೇಶಕ್ಕೆ ರಫ್ತು ಮಾಡಬಹುದು ಎಂದರು.

LEAVE A REPLY

Please enter your comment!
Please enter your name here