ಸಾರಿಗೆ ನೌಕರರ ಕನ್ನಡದ ಪ್ರೀತಿ ಅನನ್ಯವಾದುದು: ರಾಜೇಶಶೆಟ್ಟಿ.

0

ಪ್ರತಿಶತ ನೂರಕ್ಕೆ ನೂರರಷ್ಟು ಕನ್ನಡ ಬಳಕೆಯನ್ನು ಮಾಡುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಸನ ವಿಭಾಗ ಮಾಡುತ್ತಿದ್ದು, ಕನ್ನಡ ಭಾಷೆಯನ್ನು ಬಳಸುವುದು ಕನ್ನಡಿಗರದ ನಮ್ಮ ಹೆಮ್ಮೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ರಾಜೇಶಶೆಟ್ಟಿ ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನ ಅಭಿಯಾನ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯವರು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡುತ್ತಾ ಪ್ರತಿಯೊಬ್ನ ಕನ್ನಡಿಗನಿಗೂ ತನ್ನ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನವಿರಬೇಕು, ಯಾವ ಮನುಷ್ಯನಿಗೆ ಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನವಿಲ್ಲವೋ ಅವನಿಂದ ಯಾವುದೇ ಸಾಧನೆ ಸಾಧ್ಯವಾಗಿವುದಿಲ್ಲ ಎಂದರು.

ಸಹಸ್ರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ತನ್ನದೇ ಆದಂತಹ ಮಹತ್ವವಿದ್ದು, ಇಂತಹ ಪವಿತ್ರ ಭಾಷೆಯನ್ನು ಉಳಿಸುವ ಸಂಸ್ಕಾರ ನಮ್ಮೊಳಗೆ ಸದಾ ಜಾಗೃತವಾಗಿರಬೇಕು. ಈ ಹಿನ್ನೆಲೆಯಲ್ಲಿ ನಮ್ಮ ವಿಭಾಗದ ಎಲ್ಲ ಶಾಖೆಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕನ್ನಡವನ್ನೆ ಬಳಸುತ್ತಿರುವುದು ಹಾಗೂ ಚಾಲನಾ ಸಿಬ್ಬಂದಿಗಳಾದ ಚಾಲಕ, ನಿರ್ವಾಹಕರು ಕನ್ನಡದ ಬಳಕೆಯನ್ಬು ಮಾಡುವುದು ನಮಗೆ ನಿಜಕ್ಕೂ ಹೆಮ್ಮೆಯಾಗಿದೆ. ಈ ನಿಟ್ಟಿನಲ್ಲಿ ವಿಭಾಗದಲ್ಲಿ ಕನ್ನಡ ಗ್ರಂಥಾಲಯವನ್ನು ಸಹ ತೆರೆದಿದ್ದು ನೌಕರರುಗಳಿಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಓದಿಸುವ ನಿಟ್ಟಿನಲ್ಲಿ ಪ್ರೇರೇಪಿಸಲಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಅನುಷ್ಠಾನ ಬಳಕೆಯ ಅಭಿಯಾನ ಕಾರ್ಯಕ್ರಮದಿಂದ ಮತ್ತಷ್ಟು ಹೆಚ್ಚು ಪ್ರಮಾಣದಲ್ಲಿ ಕನ್ನಡದ ಕೆಲಸವನ್ನು ಮಾಡಲು ಉತ್ಸಾಹ ಬಂದಂತಾಗಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ದೂರವಾಣಿ ಮೂಲಕ ಅಭಿಯಾನವನ್ನು ಕುರಿತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಮಾತನಾಡಿ ಸಾರಿಗೆ ವಲಯದಲ್ಲಿ ಈಗಾಗಲೇ ಅತ್ಯುತ್ತಮವಾಗಿ ಭಾಷೆಯನ್ನು ಉಳಿಸುವ ಕೆಲಸವಾಗುತ್ತಿರುವುದು ನಿಜಕ್ಕೂ ಪ್ರಶಂಸನೀಯವಾದುದು, ಮುಂದೆಯೂ ಕೂಡಾ ಕನ್ನಡದ ಕವಿವಾಣಿಗಳನ್ನು, ಕನ್ನಡದ ಘೋಷ ವಾಕ್ಯಗಳನ್ನು ನಿಗಮದ ವಾಹನಗಳಲ್ಲಿ ಹೆಚ್ಚೆಚ್ಚು ಬರೆಸುವ ಮೂಲಕ ಸಾರಿಗೆ ನಿಗಮದ ವಾಹನಗಳು ಹೋಗುವ ಪ್ರತಿ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ ಕನ್ನಡದ ಕಂಪನ್ನು ಪಸರಿಸುವ ಕೆಲಸವನ್ನು ಮಾಡುವಂತಾಗಲಿ, ನೀವು ಮಾಡುವ ಕನ್ನಡದ ಕೆಲಸಗಳಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯರಾದ ಜಾವಗಲ್ ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಭಾಷೆಯ ಬಗ್ಗೆ, ಕನ್ನಡವನ್ನೇ ಬಳಸಿ ಉಳಿಸುವ ಅಭಿಮಾನ ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಪುಟಿದೇಳಬೇಕು, ಆಗಲೇ ಕನ್ನಡ ಭಾಷೆ ಉಳಿಯಲು ಸಾಧ್ಯ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕನ್ನಡ ಕಾಯಕ ವರ್ಷದಲ್ಲಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಇಲಾಖೆಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನದ ಬಗ್ಗೆ ಈಗಾಗಲೇ ಪ್ರತಿ ತಿಂಗಳು ಅಭಿಯಾನವನ್ನು ಮಾಡುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಅಭಿಯಾನ ಯಶಸ್ಸು ಕಾಣುತ್ತಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಆಶಯದಂತೆ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಸಾಗೋಣಾ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯರಾದ ಬಿ.ಟಿ.ಮಾನವ, ಬೆಳಗುಂಬ ಜಯಶಂಕರ್, ದಯಾನಂದ ಸಕಲೇಶಪುರ, ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳಾದ ಕೆ.ಟಿ.ರವಿ, ವಿಭಾಗೀಯ ಸಂಚಾರ ಅಧಿಕಾರಿ ಮಂಜುನಾಥ್, ಕಾನೂನು ಅಧಿಕಾರಿ ಸುಲೋಚನಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕೃಷ್ಣಪ್ಪ, ಸಹಾಯಕ ಲೆಕ್ಕಾಧಿಕಾರಿ ಜಯಂತ್, ಅಂಕಿ ಅಂಶಾಧಿಕಾರಿ ಪ್ರೇಮಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here