ಹಾಸನ ಜಿಲ್ಲೆಯಲ್ಲಿ ನಿಲ್ಲದ ಮಳೆ ಅಬ್ಬರ: ಜನ ಜೀವನ ತತ್ತರ ; ಈ ನಡುವೆ ಮಗು ಬಾಣಂತಿ ರಕ್ಷಣೆ

0

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಮುಂದುವರಿದಿದೆ.
ನಗರದಾದ್ಯಂತ ಕಳೆದ ರಾತ್ರಿ ಹುಚ್ಚು ಮಳೆ ಸುರಿದು ಅಪಾರ ಹಾನಿಯಾಗಿದೆ. ಎಡೆ ಬಿಡದೆ ಸುರಿದ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದರಿಂದ ರಸ್ತೆಗಳು ಕೆರೆಯಂತಾಗಿದ್ದವು. ಇದರಿಂದ ವಾಹನ ಸವಾರರು ಪರದಾಡಿದರು. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಬಿ.ಎಂ.ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿದ್ದರಿಂದ ಕೆಲಹೊತ್ತು ಸಂಚಾರಕ್ಕೆ ವ್ಯತ್ಯೆಯ ಉಂಟಾಗಿತ್ತು. ಎನ್‌ಡಿಆರ್‌ಕೆ ಕಾಲೇಜು ಬಳಿಯ ರೈಲ್ವೆ ಅಂಡರ್ ಪಾಸ್ ಸಹ ಜಲಾವೃತವಾಗಿತ್ತು.


ಇನ್ನು ನಗರದ ತಗ್ಗು ಪ್ರದೇಶಗಳಾದ ಚಿಕ್ಕನಾಳು, ಚಿಪ್ಪಿನಕಟ್ಟೆ, ಅಂಬೇಡ್ಕರ್ ನಗರ, ಪೆನ್ಷನ್ ಮೊಹಲ್ಲಾ, ಮೆಹಬೂಬ್ ನಗರ, ಅಜಾದ್ ಮೊಹಲ್ಲಾಗಳಲ್ಲಿರುವ ಚರಂಡಿಗಳು ಬ್ಲಾಕ್ ಆಗಿ ನೀರು ಮನೆಗಳಿಗೆ ನೀರು ನುಗ್ಗಿತ್ತು.
ಮೊದಲೇ ಸರಿಪಡಿಸಿ ಎಂದು ಮನವಿ ನೀಡಿದ್ದರೂ, ಸ್ಪಂದಿಸದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕಿದರು.
ನಂತರ ಎಸ್‌ಡಿಪಿಐ ಕಾರ್ಯಕರ್ತರು, ಸಣ್ಣ ಸಣ್ಣ ಮೋಟಾರ್ ಸಹಾಯದಿಂದ ಮನೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರ ಹಾಕಲು ನೆರವಾದರು.
ಕೆಲವು ಕಡೆಗಳಲ್ಲಿ ಬ್ಲಾಕ್ ಆಗಿದ್ದ ಚರಂಡಿಗಳನ್ನೂ ಸರಿಪಡಿಸಲಾಯಿತು.

ಅಪಾರ ಹಾನಿ:
ಅರಕಲಗೂಡು ತಾಲೂಕಿನಲ್ಲೂ ವರುಣನ ಆರ್ಭಟ ನಿಂತಿಲ್ಲ. ಕೆರೆ ಏರಿ ಒಡೆದು ಪರಿಣಾಮ ನೂರಾರು ಎಕೆರೆ ಪ್ರದೇಶಕ್ಕೆ ಕೆರೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ದುಮ್ಮಿ, ಮಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈಗಲೂ ಎಲ್ಲೆಂದರಲ್ಲಿ ನೀರು ಹರಿಯುತ್ತಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ.
ರಸ್ತೆ ಮೇಲೂ ನೀರು ಹರಿಯುತ್ತಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಎಲ್ಲಾ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಕೆರೆ ಒಡೆದು ನೀರು ನುಗ್ಗಿದ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಕರೆಂಟ್ ಕಡಿತಗೊಂಡಿದೆ.


ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಜೋರು ಮಳೆಗೆ ಕರೆಕಟ್ಟೆ ಭರ್ತಿಯಾಗಿವೆ. ಕೋಡಿ ಬಿದ್ದ ನೀರಿನಿಂದ ರಸ್ತೆ, ಜಮೀನು, ತೋಟ,ಗದ್ದೆ ಜಲಾವೃತವಾಗಿ ಅಪಾರ ನಷ್ಟದ ಭೀತಿ ಎದುರಾಗಿದೆ. ಕೆಲವೆಡೆ ವಾಹನ ಸಂಚಾರಕ್ಕೂ ಅಡೆತಡೆ ಉಂಟಾಗಿದೆ. ರಸ್ತೆ ಬದಿಯಿದ್ದ ಅಂಗಡಿ, ಮನೆಗಳಿಗೂ ನೀರು ನುಗ್ಗಿರುವುದರಿಂದ ನಿತ್ಯ ಬಳಕೆ ವಸ್ತುಗಳು ಹಾಳಾಗಿವೆ.

ಕೊಚ್ಚಿ ಹೋದ ಫಸಲು: ಹಾಸನ ತಾಲೂಕು ಗಾಣಿಗರ ಹೊಸಳ್ಳಿಯಲ್ಲಿ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗಿ ಜೋಳ, ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಇಲ್ಲೂ ಕೂಡ ಕೆರೆ ಏರಿ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮತ್ತೊಂದೆಡೆ ತಾಲೂಕಿನ ಮಾರಿಗುಡಿ ಕೊಪ್ಪಲಿನಲ್ಲೂ ಕೆರೆ ಕೋಡಿ ಒಡೆದು ಗದ್ದೆಗಳು ಜಲಾವೃತವಾಗಿವೆ. ಭತ್ತದ ಸಸಿ ಮಣ್ಣು ಪಾಲಾಗಿವೆ. 15 ದಿನದ ಹಿಂದೆ ನಾಟಿ ಮಾಡಿದ್ದ ಪೈರು ಇನ್ನಿಲ್ಲದಂತಾಗಿವೆ.



ಮಗು ಬಾಣಂತಿ ರಕ್ಷಣೆ:
ಚನ್ನರಾಯಪಟ್ಟಣ ತಾಲೂಕು ಬೆಕ್ಕ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಯಿಂದ
ಕೆರೆ ಏರಿ ಒಡೆದು ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿದ್ದ ತೋಟದ ಮನೆ ಜಲಾವೃತವಾಗಿತ್ತು. ಇದರಲ್ಲಿ ಬಂಧಿಯಾಗಿದ್ದ ಒಂದೂವರೆ ತಿಂಗಳ ಮಗು ಮತ್ತು ಬಾಣಂತಿಯನ್ನು ಅಗ್ನಿಶಾಮಕ ದಳದ ಸಹಾಯದಿಂದ ಸ್ಥಳೀಯರು ರಕ್ಷಣೆ ಮಾಡಿದರು. ಇನ್ನೂ ಹಲವರು ಸಿಲುಕಿಕೊಂಡಿದ್ದು ಅವರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ.

LEAVE A REPLY

Please enter your comment!
Please enter your name here