ಗಂಡನ ಮನೆಯಲ್ಲಿ ಸುಖವಾಗಿ ಬಾಳಬೇಕಿದ್ದ ಒಂದೇ ಮನೆಯ ಮಕ್ಕಳಿಬ್ಬರು ಒಂದೇ ತಿಂಗಳಲ್ಲಿ ದುರಂತ ಅಂತ್ಯಗಳು

0

ಹಾಸನ / ಸಕಲೇಶಪುರ : ಒಂದೇ ತಿಂಗಳ ಅಂತರದಲ್ಲಿ ಅಕ್ಕ-ತಂಗಿಯರಿಬ್ಬರೂ ನೇಣಿಗೆ ಕೊರಳೊಡ್ಡಿದ್ದು ಹೆಣ್ಣುಮಕ್ಕಳಿಬ್ಬರ ದುರಂತ ಸಾವಿನ ಸುದ್ದಿ ಕೇಳಿದ ಹೆತ್ತವರ ಒಡಲಿಗೆ ಬೆಂಕಿ ಸುರಿದಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೊಡು ಗ್ರಾಮದ ಕಾಫಿ ತೋಟದ ಕಾರ್ವಿಕರಾದ ಉದಯ್ ಮತ್ತು ಅನಿತಾ ದಂಪತಿಯ ಮಕ್ಕಳಾದ ಸೌಂದರ್ಯ(21) ಮತ್ತು ಐಶ್ವರ್ಯ (19) ಮೃತ ದುರ್ದೈವಿಗಳು.
ಉದಯ್ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಈ ಪೈಕಿ ಎರಡನೇ ಮಗಳು ತುಮಕೂರಲ್ಲಿ ತನ್ನ ಗಂಡನ ಮನೆಯಲ್ಲೇ ನೇಣುಬಿಗಿದುಕೊಂಡು ಮೃತಪಟ್ಟಿದ್ದಳು. ಇದಾದ 17 ದಿನಕ್ಕೆ ಹಿರಿಯ ಮಗಳೂ ಹೊಸನಗರದ ತನ್ನ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಇನ್ನಿಬ್ಬರು ಮಕ್ಕಳು ಪಿಯುಸಿ, ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ.
ಹಿರಿಯ ಮಗಳು ಸೌಂದರ್ಯ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಓದುತ್ತಿದ್ದಳು ಈ ಕಾರಣಕ್ಕಾಗಿಯೇ ಮದವೆಯಾಗಲು ನಿರಾಕರಿಸಿದ್ದಳು. ಬಳಿಕ ಈಕೆಯ ತಂಗಿ ಐಶ್ವರ್ಯಾಗೆ ಕಳೆದ ವರ್ಷ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜತೆ ಮದುವೆ ಮಾಡಲಾಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿ ಇಬ್ಬರೂ ತುಮಕೂರು ನಗರದ ಸರಸ್ವತಿಪುರಂನಲ್ಲಿ ವಾಸಿಸುತ್ತಿದ್ದರು.
ಇತ್ತ ಹಿರಿಯ ಮಗಳು ಸೌಂದರ್ಯಗೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಜತೆ ಫೇಸ್‌ಬುಕ್‌ನಿಂದ ಗೆಳೆತನ ಶುರುವಾಗಿ ಕ್ರಮೇಣ ಪ್ರೇಮಾಂಕುರವಾಗಿತ್ತು. ಬೇರೆ ಬೇರೆ ಜಾತಿ ಕಾರಣಕ್ಕೆ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಐಶ್ವರ್ಯ ಮತ್ತು ಉಮೇಶ್ ಇಬ್ಬರೂ 2020ರ ನವೆಂಬರ್‌ನಲ್ಲಿ ಮದುವೆ ಆಗಿದ್ದರು. ಎಲ್ಲಾದರೂ ಇರು, ಚೆನ್ನಾಗಿರು ಎಂದು ಹೇಳಿ ಆಕೆಯ ಪೋಷಕರೂ ಸುಮ್ಮನಾಗಿದ್ದರಂತೆ.ಸೌಂದರ್ಯ ತನ್ನ ಗಂಡನ ಮನೆ ಕಾಡಿಗ್ಗೇರಿಯಲ್ಲೇ ಇದ್ದಳು.
2021ರ ಜೂ.8ರಂದು ಗಂಡನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಎರಡನೇ ಮಗಳು ಐಶ್ವರ್ಯಳ ಶವ ಪತ್ತೆಯಾಗಿತ್ತು. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ಕೊಡುತ್ತಿದ್ದರು. ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಪಾಲಕರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜೂ.10ರಂದು ತಂಗಿ ಐಶ್ವರ್ಯಳ ಅಂತ್ಯಕ್ರಿಯೆ ವೇಳೆ ಅಕ್ಕ ಸೌಂದರ್ಯ ತನ್ನ ಗಂಡನೊಂದಿಗೆ ಬಂದು ಹೋಗಿದ್ದಳು. ಇದಾದ 17 ದಿನಕ್ಕೆ ಅಂದರೆ ಜೂ.25ರಂದು ಸೌಂದರ್ಯ ಕೂಡ ತನ್ನ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತಳ ಪಾಲಕರು ಕುಸಿದು ಬಿದ್ದಿದ್ದಾರೆ.
ಮಗಳ ಸಾವಿನಿಂದ ಆಕ್ರೋಶಗೊಂಡ ಆಕೆಯ ಪಾಲಕರು ಉಮೇಶನ ಮನೆ ಬಳಿಯೇ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಅಲ್ಲದೆ ಸೂಕ್ತ ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಫ್ಯಾನ್ ಹುಕ್‌ಗೆ ನೇತು ಹಾಕಿದ್ದಾರೆ ಎಂದು ಮೃತಳ ತಂದೆ ಉದಯ್ ಆರೋಪಿಸಿದ್ದು, ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಾರಣ. ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ಯೋಜನೆ ಮಾಡಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಡನ ಮನೆಯಲ್ಲಿ ಸುಖವಾಗಿ ಬಾಳಬೇಕಿದ್ದ ಮಕ್ಕಳಿಬ್ಬರು ಒಂದೇ ತಿಂಗಳಲ್ಲಿ ದುರಂತ ಅಂತ್ಯ ಕಂಡಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

-ಜನಮಿತ್ರ

LEAVE A REPLY

Please enter your comment!
Please enter your name here