ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಬಂದ್ದಿದ್ದ ಪ್ರಿಯಕರನೋರ್ವ, ಆಕೆ ಕೀಳು ಜಾತಿಯವಳೆಂದು ವಿವಾಹವಾಗದೇ ಇದ್ದುದರಿಂದ ಮನನೊಂದು ಯುವತಿಯೊಬ್ಬಳು ಗೊರೂರಿನ ಹೇಮಾವತಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎನ್ನಲಾಗಿದೆ.
ಹಾಸನ : ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ದೊಡ್ಡಯರಗನಾಳು ಗ್ರಾಮದ ಯುವತಿ ಹಾಸನದ ಕಾಲೇಜಿನಲ್ಲಿ ಓದುತ್ತಿದ್ದು, ದೊಡ್ಡಕಾಡನೂರು ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಪ್ರದೀಪ್ ಎಂಬಾತ ಈಕೆಗೆ ಪ್ರೀತಿಸುತ್ತಿದ್ದ. ಈ ಬಗ್ಗೆ ಯುವತಿಯ ಮನೆಯವರಿಗೂ ತಿಳಿಸಿದ್ದ ಈತ. ‘ನಾವು ಪರಿಶಿಷ್ಟ ಜಾತಿಯವರು, ನೀವು ಬೇರೆ ವರ್ಗದವರು. ಹೊಂದಾಣಿಕೆ ಆಗುವುದಿಲ್ಲ’ ಎಂದು ಆಕೆಯ ಪಾಲಕರು ಅದಾಗಲೇ ತಿಳಿಸಿದ್ದರು. ಆದರೂ ಪಟ್ಟು ಬಿಡದ ಪ್ರದೀಪ್, ಮನೆಯವರನ್ನು ಒಪ್ಪಿಸುವುದಾಗಿ ಹೇಳಿದ್ದ.
4 ತಿಂಗಳಾದರೂ ಪ್ರದೀಪ್, ತನ್ನ ತಂದೆ- ತಾಯಿಯನ್ನು ಕರೆದುಕೊಂಡು ಬರದೇ ಇದ್ದುದರಿಂದ ಯುವತಿಯನ್ನು ಹಿರಿಸಾವೆ ಹೋಬಳಿ ಮತ್ತಿಘಟ್ಟ ಗ್ರಾಮದ ಯುವಕನೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಮುಂದೆ ನಡೆದಿದ್ದೇ ಬೇರೆ, ಪ್ರದೀಪ್ ಮದುವೆಯಾಗಿದ್ದ ಆ ಯುವತಿಯನ್ನು ನಂಬಿಸಿ ಕರೆದುಕೊಂಡು ಹೋಗಿದ್ದ. ಈ ಬಗ್ಗೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ ಯುವತಿಯೊಂದಿಗೆ ಸಿನಿಮೀಯ ರೀತಿ ಪ್ರದೀಪ್ ಹಿರೀಸಾವೆ ಠಾಣೆಗೆ ಹಾಜರಾಗಿದ್ದ.
ಈ ಸಂದರ್ಭದಲ್ಲಿ ಯುವತಿಯು, ‘ನಾನು ಗಂಡನಿಗೆ ವಿಚ್ಛೇದನ ನೀಡಿ ಪ್ರದೀಪ್‍ನೊಂದಿಗೆ ಹೋಗುವುದಾಗಿ’ ಹೇಳಿಕೆ ನೀಡಿದ್ದಳು. ಯುವತಿಯನ್ನು ತನ್ನ ಜೊತೆ ಕರೆದುಕೊಂಡು ಹೋದ ಪ್ರದೀಪ್, ನಂತರ ‘ಆಕೆ ಕೀಳು ಜಾತಿಗೆ ಸೇರಿದ್ದು, ಮನೆಯವರು ಒಪ್ಪುವುದಿಲ್ಲ’ ಎಂದು ಮದುವೆಯಾಗದೇ ಹಾಗೆಯೆ ಇಟ್ಟುಕೊಂಡಿದ್ದ. ಇದರಿಂದ ಮನನೊಂದು ಯುವತಿ ಗೊರೂರು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.