ಸಕಲೇಶಪುರ: ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಹಾಲೇಬೇಲೂರು ಗ್ರಾಮದ ಮಧು (31) ಮೃತ ದುರ್ದೈವಿ. ಬುಧುವಾರ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ವಿಷ ಸೇವನೆ ಮಾಡಿದ್ದ ಕೂಡಲೇ ಆತನನ್ನು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಯುವಕ ಮೃತಪಟ್ಟಿದ್ದಾನೆ.
ಮೃತನು ಪಟ್ಟಣದ ಮಧು ಸ್ಟುಡಿಯೋದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿ ನಂತರ ಮಲ್ಲಮ್ಮನ ರಸ್ತೆಯಲ್ಲಿ ತನ್ನದೇ ಆದ ನಿಸರ್ಗ ಸ್ಟುಡಿಯೋ ಪ್ರಾರಂಭಿಸಿದ್ದರು. ಜೊತೆಗೆ ಜಮೀನಿನಲ್ಲಿ ರೈತರಾಗಿ ಕೆಲಸ ಮಾಡುತ್ತಿದ್ದರು. ಅಪಾರ ಸ್ನೇಹ ವೃಂದವನ್ನು ಹೊಂದಿದ್ದ ಇವರು ಯಾವ ಕಾರಣಕ್ಕೆ ವಿಷ ಸೇವನೆ ಮಾಡಿದರೆಂಬುದು ತಿಳಿದಿಲ್ಲ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ