ಹಾಸನ : ಎದೆ ನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಹಠಾತ್ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಕರು ವೈದ್ಯರು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ, ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆ ಅರವಳಿಕೆ ತಜ್ಞರನ್ನು ಅಮಾನತುಗೊಳಿಸಲಾಗಿದೆ. ಹೆಬ್ಬಾಳು ಗ್ರಾಮದ ಶಿವಣ್ಣ (60) ಎದೆ ನೋವು ಹಿನ್ನೆಲೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಆಸ್ಪತ್ರೆಗೆ ಬಂದಾಗ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ ಎಸಗಿದ ಆರೋಪ ವೈದ್ಯರ ವಿರುದ್ಧ ಕೇಳಿಬಂದಿದೆ. ಪರಿಣಾಮ, ಶಿವಣ್ಣ ಅವರು ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ಹೋರಾಟ ನಿರತರ ಪರ ನಿಂತು ವೈದ್ಯರ ನಿರ್ಲಕ್ಷದ ಬಗ್ಗೆ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅಸಮದಾನ ಹೊರ ಹಾಕಿದರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ವೈದ್ಯರಿಗೆ ಸೂಚಿಸಿದರಲ್ಲದೆ, ಹೋರಾಟ ಹಿಂಪಡೆಯಲು ಮೃತರ ಸಂಬಂಧಿಕರಿಗೆ ಮನವಿ ಮಾಡಿದರು. , ಇತ್ತ, ಸ್ಥಳಕ್ಕೆ ದೌಡಾಯಿಸಿದ ಡಿಹೆಚ್ಒ ಡಾ.ಶಿವಸ್ವಾಮಿ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ವೈದ್ಯನ ಕರ್ತವ್ಯ ಲೋಪ ಸಾಬೀತಾಗಿದೆ.
ಹೀಗಾಗಿ ಅರವಳಿಕೆ ತಜ್ಞ ಡಾ.ಹರ್ಷ ಅವರನ್ನು ಅಮಾನತುಗೊಳಿಸಿದ ಡಿಹೆಚ್ಒ, ತಾಲ್ಲೂಕು ವೈದ್ಯಾಧಿಕಾರಿ ಹಾಗೂ ರಾತ್ರಿ ಕರ್ತವ್ಯದಲ್ಲಿದ್ದ ನರ್ಸ್‌ಗೆ ನೋಟೀಸ್ ನೀಡಲು ಮುಂದಾಗಿದ್ದಾರೆ. ವೈದ್ಯರನ್ನು ಅಮಾನತು ಮಾಡುತ್ತಿದ್ದಂತೆ ಪ್ರತಿಭಟನೆ ಹಿಂಪಡೆದ ಸಂಬಂಧಿಕರು ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ದರು.