ಕೋವಿಡ್-19 ಲಸಿಕೆ ವಿತರಣೆಗೆ ವ್ಯವಸ್ಥಿತ ಕ್ರಮವಹಿಸಿ ಸಚಿವರಾದ ಕೆ ಗೋಪಾಲಯ್ಯ ಸೂಚನೆ

0

ಹಾಸನ ಜಿಲ್ಲೆಯಲ್ಲಿ ಕೋವಿಡ್ -19 ಪರಿಸ್ಥಿತಿ ಮೊದಲ ಹಂತದ ಲಸಿಕೆ ವಿತರಣೆ ವ್ಯವಸ್ಥೆ ಹಾಗೂ ಇತರ ಆಡಳಿತಾತ್ಮಕ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರಿಕ ಮತ್ತು ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಗೋಪಾಲಯ್ಯ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿದರು

ಜಿಲ್ಲೆಯಲ್ಲಿನ ಹಾಲಿ ಕೋವಿಡ್ -19 ಸ್ಥಿತಿಗತಿ ಬಗ್ಗೆ ವಿವರ ಪಡೆದ ಸಚಿವರು ಆರೋಗ್ಯ ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ಅಧಿಕಾರಿ ಸಿಬ್ಬಂದಿ ಮತ್ತು ಮುಂಚೂಣಿ ಕೆಲಸದಲ್ಲಿರುವವರಿಗೆ ಶೀಘ್ರವಾಗಿ ಲಸಿಕೆ ದೊರೆಯಲಿದ್ದು ಯಾವುದೇ ಲೋಪವಾಗದಂತೆ ವಿತರಣೆಗೆ ವ್ಯವಸ್ಥೆ ಮಾಡಿ ಎಂದರು.
ಎಲ್ಲಾ ತಾಲ್ಲೂಕುಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಿ ಮೊದಲು ಹಾಗೂ ಎರಡನೇ ಹಂತದ ಲಸಿಕಾ ವಿತರಣಾ ಕಾರ್ಯದಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಿ ಎಂದರು. ಕೋವಿಡ್ -19 ಪ್ರಾರಂಭದಿಂದ ಈವರೆಗೆ ಎಲ್ಲಾ ಆಸ್ಪತ್ರೆಗಳು ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಭಾಯಿಸಿದ್ದು ಮುಂದೆಯೂ ಇದೇ ಕಾಳಜಿ ಮತ್ತು ಮುಂಜಾಗ್ರತೆ ಇರಲಿ ಎಂದು ಸಚಿವರು ಹೇಳಿದರು

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ,ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ|| ಕಾಂತರಾಜ್ ಹಾಗೂ ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್ ಜಿಲ್ಲಾ ಶಸ್ತ್ರ ಡಾ|| ಕೃಷ್ಣಮೂರ್ತಿ ಅವರು ಲಸಿಕಾ ವಿತರಣೆಗೆ ಮಾಡಿಕೊಂಡಿರುವ ಸಿದ್ಧತೆಗಳು ಜ.8 ರಂದು ನಡೆಯಲಿರುವ ಅಣಕು ಲಸಿಕಾ ಪ್ರಯೋಗದ ಬಗ್ಗೆ ವಿವರಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರು ಪದಾಧಿಕಾರಿಗಳು ಎಲ್ಲ ಸೇರಿ ಒಟ್ಟು 17185 ಮಂದಿ ಇದ್ದು ವಿತರಣೆಗೆ ಯೋಜಿತ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಸಾಕಷ್ಟು ಔಷಧಿ ಸಂಗ್ರಹಕ್ಕೆ ರೆಫ್ರಿಜರೇಟರ್ ,ಐಸ್ ಪ್ಯಾಕ್ ಗಳು ಲಭ್ಯವಿದ್ದು ಯಾವುದೇ ಕೊರತೆಯಾಗದಂತೆ ಲಸಿಕಾ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಮಲೆನಾಡು ಭಾಗದಲ್ಲಿ ಕಸ್ತೂರಿರಂಗನ್ ವರದಿ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಹಾಗೂ ಆನೆ ಹಾವಳಿ ತಡೆಗೆ ಪರಿಣಾಮಕಾರಿ ಕ್ರಮವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸಚಿವರ ಗಮನಕ್ಕೆ ತಂದರು .
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೋವಿಡ್ -19 ಲಸಿಕೆ ವಿತರಣೆಗೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಹಕ್ಕಿ ಜ್ವರ ಜಿಲ್ಲೆಗ ಹರಡಿಲ್ಲ ಆದರೂ ನಿಯಂತ್ರಣಕ್ಕೆ ಕ್ರಮಗಳಿಗೆ ಸಂಬಂಧಿಸಿದಂತೆ ನಾಳೆಯೇ ಸಭೆ ನಡೆಸಿ ಅಗತ್ಯ ಮುಂಜಾಗ್ರತೆಗಳನ್ನು ವಹಿಸಲು ಜಿಲ್ಲಾಧಿಕಾರಿಗೆ ಸೂಚಿಸಿದರು .
ಜಿಲ್ಲಾಧಿಕಾರಿಯವರು ಆರೋಗ್ಯ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಜಂಟಿಯಾಗಿ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವರಿಗೆ ಹೇಳಿದರು.
ಮುಂದಿನ ವಾರದಲ್ಲಿ ಅರಣ್ಯ ಸಚಿವರನ್ನು ಜಿಲ್ಲೆಗೆ ಕರೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಸ್ಥಳೀಯ ಕಾಡಾನೆ ಹಾಗೂ ಇತರ ವನ್ಯಜೀವಿ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ವರದಿ ವಿಷಯವಾಗಿ ಬೆಳಗಾರರು ರೈತರು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಕೃಷಿಕರ ಹಿತ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು .

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಕಳೆದೊಂದು ತಿಂಗಳು ಯಾವುದೇ ಸಭೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ ಮುಂದೆ ಜಿಲ್ಲೆಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ನಿರಂತರವಾಗಿ ಗಮನಹರಿಸಲಾಗುವುದು ಎಂದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ ಭಾರತಿ, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ .ಎನ್ . ನಂದಿನಿ ಮತ್ತಿತರು ಹಾಜರಿದ್ದರು.

LEAVE A REPLY

Please enter your comment!
Please enter your name here