ನ್ಯಾಯಾಂಗದ ಮೇಲಿನ ನಂಬಿಕೆ ಉಳಿಸಿ : ನ್ಯಾ. ಸೋಮಶೇಖರ್ ಕರೆ

0

(ಕರ್ನಾಟಕ ವಾರ್ತೆ)ನ್ಯಾಯಾಂಗ ವ್ಯವಸ್ಥೆ ಮೇಲೆ ಜನಸಾಮಾನ್ಯರು ಅಪಾರ ನಂಬಿಕೆ ಹೊಂದಿದ್ದು, ಅದನ್ನು ಉಳಿಸಿಕೊಳ್ಳುವಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕೆಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಕೆ. ಸೋಮಶೇಖರ್ ಕರೆ ನೀಡಿದ್ದಾರೆ .

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿಂದು ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‌ಮಾತನಾಡಿದ ಅವರು ಸಂವಿಧಾನದ ಆಶಯಗಳ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು,ನ್ಯಾಯಾಂಗ ವ್ಯವಸ್ಥೆಯ ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಕೀಲರು ಸಂವಿಧಾನದ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿ ಜನಸಾಮಾನ್ಯರ ಹಕ್ಕುಗಳ ರಕ್ಷಣೆ ಮಾಡುವ ಜೊತೆಗೆ ಕರ್ತವ್ಯಗಳ ಬಗ್ಗೆಯೂ ಅರಿವು ಮೂಡಿಸಬೇಕು ಎಂದರು.

ವಕೀಲರು ಪರಿಶ್ರಮ,ಶ್ರದ್ಧೆ , ಬದ್ದತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಹೆಚ್ಚಿನ ಜ್ಞಾನ ಸಂಪಾದಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು .

ದೇಶದ ಸಮಗ್ರತೆಯ ಒಳಿತಿನ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು ಎಂದು ನ್ಯಾ.ಕೆ.ಸೋಮಶೇಖರ್ ‌ಹೇಳಿದರು.

ಹಾಸನ ಜಿಲ್ಲೆ ದೇಶಕ್ಕೆ ಪ್ರಧಾನಮಂತ್ರಿ ಸೇರಿದಂತೆ ಹಲವರು ಗಣ್ಯರನ್ನು ವಿಚಾರವಂತರನ್ನು‌ ನೀಡಿದೆ ಎಂದ ಅವರು ತಾವು ಇಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ‌ ಮಾಡಿದ ಅನುಭವಗಳನ್ನು ಹಂಚಿಕೊಂಡರು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲೆಯವರಾದ ಹೆಚ್.ಟಿ ಸಂದೇಶ್ ಅವರು ಮಾತನಾಡಿ ದೇಶದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನವನ್ನು ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿಜಿ ,ಬಿ ಅರ್. ಅಂಬೇಡ್ಕರ್, ಡಾ ಬಾಬು ರಾಜೇಂದ್ರ ‌ಪ್ರಸಾದ್ ಸೇರಿದಂತೆ ಅನೇಕ ವಕೀಲ ಮಹನೀಯರು ಪಾಲ್ಗೊಂಡಿದ್ದರು ಎಂದು ಅವರು ಸ್ಮರಿಸಿದರು.

ವಕೀಲರು ಬೇರೆಯವರ ನ್ಯಾಯ ಮತ್ತು ಹಕ್ಕುಗಳಿಗಾಗಿ ಶ್ರಮಿಸುತ್ತಾರೆ ಅದಕ್ಕಾಗಿ ವಕೀಲ ವೃತ್ತಿ ವಿಶೇಷ ಗೌರವ ಪಡೆದಿದೆ ಎಂದರು.

ಸ್ವಾತಂತ್ರ್ಯ ನಂತರ ನಮ್ಮಲ್ಲಿ ರಾಷ್ಟ್ರನಾಯಕರು , ರಾಜನೀತಿ ತಜ್ಞರು ಕೊರತೆ ಕಾಡುತ್ತಿದೆ .
ಸಾಮಾಜಿಕ ಆಡಳಿತಾತ್ಮಕ ಕ್ಷೇತ್ರದಲ್ಲಿ ವಕೀಲರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಿದೆ ಎಂದು ನ್ಯಾ.ಹೆಚ್ ಟಿ.ಸಂದೇಶ್ ಅಭಿಪ್ರಾಯಪಟ್ಟರು.

ವಕೀಲ ವೃತ್ತಿಯಲ್ಲಿ ಎಲ್ಲಾ ಕ್ಷೇತ್ರದ ಜ್ಞಾನ ಹೊಂದುವ ಅವಕಾಶ ಹಾಗೂ ಅವಶ್ಯಕತೆ ಇದೆ . ವಕೀಲರು ಸಮಾಜದ ಎಲ್ಲಾ ವಿಭಾಗಗಳ ಅಧ್ಯಯನ ಮಾಡಿ ಅರಿವು ಸಂಪಾದಿಸಿಕೊಂಡು ಶೋಷಿತರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.

ವಕೀಲರು ಅತ್ಮಾವಲೋಕನ ಮಾಡಿಕೊಳ್ಳಬೇಕು
ಪ್ರತಿಯೊಬ್ಬರೂ ಸಾಮಾಜಿಕ ಹೊಣೆಗಾರಿಕೆ ಅರಿತಿರಬೇಕು .
ಪ್ರಾಮಾಣಿಕತೆ, ಧೈರ್ಯ, ಶ್ರಮಶೀಲತೆ , ಬುದ್ದಿ, ಚಾಕಚಕ್ಯತೆ ,
ವಾಕ್ ಚಾತುರ್ಯ, ತೀರ್ಪಿನ ಅರಿವು ,ಸಹಭಾಗಿತ್ವ ,ಆತ್ಮಸಾಕ್ಷಿಯ ಮಹತ್ವ ತಿಳಿದಿಬೇಕು ಎಂದರು.

ತಾವೂ ಸಹ ಹಾಸನ ವಕೀಲರ ಸಂಘದ ಸದಸ್ಯರಾಗಿ ಕೆಲಸ ಮಾಡಿದ್ದು, ಹಾಸನ ಜಿಲ್ಲೆಯ ಪುತ್ರ ಎಂಬುದು ತಮಗೆ ಹೆಮ್ಮೆಯ ವಿಷಯ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ಅವರು ಮಾತನಾಡಿ
ವಕೀಲರ ಸಾಮರ್ಥ್ಯದ ಅನುಗುಣವಾಗಿ ಕಕ್ಷಿದಾರರಿಗೆ ನ್ಯಾಯ ಒದಗುತ್ತದೆ.ಜಿಲ್ಲೆಯಲ್ಲಿ ಉತ್ತಮ ವಕೀಲರಿದ್ದಾರೆ. ಸುಸಜ್ಜಿತ ನ್ಯಾಯಾಲಯ ಕಟ್ಟಡ ಇದೆ ಎಲ್ಲಾ ನ್ಯಾಯಾಧೀಶರು ವಕೀಲರು ಹೆಚ್ಚು ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿ ಶೀಘ್ರ ನ್ಯಾಯ ಒದಗಿಸಬೇಕು ಎಂದರು.

ಜಿಲ್ಲಾಧಿಕಾರಿ ಅರ್. ಗಿರೀಶ್ ಅವರು ಮಾತನಾಡಿ ಸಧೃಡ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವವಾದದ್ದು ಸ್ವಾತಂತ್ರ್ಯಾ ಸಂಗ್ರಾಮದಲ್ಲಿಯೂ ವಕೀಲರು ಸಕ್ರಿಯವಾಗಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ‌. ಆ ನಂತರ ಸ್ವತಃ ವಕೀಲರಾಗಿದ್ದ ಡಾ ಬಿ‌.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದೆ ಅದರ ಅನುಷ್ಠಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಹಾಗೂ ವಕೀಲರ ಕೊಡುಗೆ ಮಹತ್ವವಾದದ್ದು ಎಂದರು .

ವಕೀಲರಿಗೆ ಕಾನೂನಿನ ಬಗ್ಗೆ , ಸಂವಿಧಾನ ,ಹಕ್ಕು ಮತ್ತು ಅವಕಾಶಗಳ ಬಗ್ಗೆ ಹೆಚ್ಚು ಮಾಹಿತಿ ಹಾಗೂ ಜವಾಬ್ದಾರಿ ಹೊಂದಿದ್ದು ಜನಸಾಮಾನ್ಯರ ಹಕ್ಕುಗಳ ರಕ್ಷಣೆಗೆ ಅವರು ಶ್ರಮಿಸಬೇಕು,ಅದೇ ರೀತಿ ನ್ಯಾಯಾಂಗ ಮತ್ತು ಕಾರ್ಯಾಂಗಗಳು ಒಟ್ಟಾಗಿ ಸಮಾಜದ‌ ಕಾರ್ಯನಿರ್ವಹಣೆ ಮಾಡಬೇಕು ಎಂದರು.

ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಮಾತನಾಡಿ ವಕೀಲರು ನ್ಯಾಯಾಲಯದ ಒಳಗೆ ಹಾಗೂ ಹೊರಗೆ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಹೋರಾಡುತ್ತಿದ್ದಾರೆ . ಹಾಸನದ ಜಿಲ್ಲಾ ವಕೀಲ ಸಂಘದ ಸಂಘಟನೆ ಉತ್ತಮವಾಗಿದ್ದು ಅದಕ್ಕಾಗಿ ಎಲ್ಲರನ್ನೂ ಅಭಿನಂದಿಸುವುದಾಗಿ ಹೇಳಿದರು.

ವಕೀಲರ ಸಂಘದ ಅಧ್ಯಕ್ಷರಾದ ಶೇಖರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಧನೆ ಮಾಡಿದವರು,ಕೋವಿಡ್ ಹೋರಾಟಗಾರರನ್ನು ಸನ್ಮಾನಿಸಲಾಯಿತು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾರ್ಲೆ ಮೊಗಣ್ಣಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ವಕೀಲರ ಸಂಘದ ಮಾಜಿ‌ ಅಧ್ಯಕ್ಷರಾದ ಚಂದ್ರಶೇಖರ್,
ವಕೀಲರ ಸಂಘದ ಪ್ರಮುಖರಾದ ಡಿ.ಅರ್ ಲೋಹಿತಾಶ್ಚ,ಗೀತಾ, ಸಂಧ್ಯಾಶಣೈ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here