ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಪಟಾಕಿ ಮಾರಾಟ ಮಳಿಗೆಗಳ ಮುಂಭಾಗ ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಪಟಾಕಿ ವರ್ತಕರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮಾಡುವ ಕುರಿತು ಸಭೆ ಮಡೆಸಿ ಮಾತನಾಡಿದ ಅವರು ಪಟಾಕಿ ಮಾರಾಟ ಮಳಿಗೆಗಳಲ್ಲಿ ಕಡಿಮೆ ಅಪಾಯಕಾರಿ ಹಾಗೂ ಹೆಚ್ಚು ಹಾನಿಕಾರಕವಲ್ಲದ ಪಟಾಕಿಗಳನ್ನು ಹೊರತುಪಟಿಸಿ ಬೇರಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಎಂದರು.
ಪಟಾಕಿ ಮಾರಾಟಕ್ಕೆ ನ.16 ರವರೆಗೆ ಅನುಮತಿ ನೀಡಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಹಾಗೂ ಹಸಿರು ಪಟಾಕಿಗಳ ಕರಿತು ಪರಿಶೀಲಿಸುವಂತೆ ಸೂಚಿಸಿದರಲ್ಲದೆ, ಹಸಿರು ಪಟಾಕಿಗಳ ಮೇಲೆ ಯಾವುದಾದರು ಗುರುತುಗಳಿದ್ದರೆ ಅಂತಹ ಪಟಾಕಿಗಳನ್ನೇ ಖರೀದಿಸಲು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಉಪ ವಿಭಾಗಾಧಿಕಾರಿಗಳಾದ ಗಿರೀಶ್ ನಂದನ್, ಬಿ.ಎ. ಜಗದೀಶ್, ತಹಶೀಲ್ದಾರ್‍ಗಳಾದ ಶಿವಶಂಕರಪ್ಪ, ರೇಣುಕುಮಾರ್, ನಟೇಶ್, ಡಿ.ವೈ.ಎಸ್.ಪಿ. ಪುಟ್ಟಸ್ವಾಮಿ, ಜಿಲ್ಲಾ ಅಗ್ನಿ ಶಾಮಕಾಧಿಕಾರಿ ರಂಗನಾಥ್ ಹಾಗೂ ಪಠಾಕಿ ವರ್ತಕರು ಸಭೆಯಲ್ಲಿ ಹಾಜರಿದ್ದರು.