ಹಾಸನ: ಚಿನ್ನಾಭರಣ ಪಾಲಿಷ್ ಮಾಡಿಕೊಡುವುದಾಗಿ ಮನೆಗೆ ಬಂದ ದುಷ್ಕರ್ಮಿಗಳ ಕಳ್ಳಬುದ್ದಿ ಅರಿಯದ ಮಹಿಳೆಯರಿಬ್ಬರು 1.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅರಸೀಕೆರೆಯ ಟಿಪ್ಪು ನಗರ ನಿವಾಸಿಗಳಾದ ಭಾನು ಹಾಗೂ ಪರ್ವಿನ್ ತಾಜ್ ಮೋಸಕ್ಕೊಳಗಾಗಿದ್ದಾರೆ. ಡಿ. 7ರ ಬೆಳಗ್ಗೆ 11ರ ಸಮಯದಲ್ಲಿ ಬೈಕ್‌ನಲ್ಲಿ ಮನೆ ಮುಂದೆ ಬಂದ ಅಪರಿಚಿತರು ಕೆಲವೇ ನಿಮಿಷಗಳಲ್ಲಿ ಚಿನ್ನಾಭರಣ ದೋಚಿದ್ದಾರೆ.
ಗಮನ ಬೇರೆಡೆ ಸೆಳೆದರು: ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಮನೆ ಹತ್ತಿರಕ್ಕೆ ಬಂದ ಸುಮಾರು 35 ವರ್ಷದ ಇಬ್ಬರು ಪುರುಷರು ಚಿನ್ನ ಬೆಳ್ಳಿ ಪಾಲಿಷ್ ಮಾಡಿಕೊಡುವುದಾಗಿ ಹೇಳಿದ್ದಾರೆ, ಅದಕ್ಕೆ ಭಾನು ಮತ್ತು ಪರ್ವಿನ್ ತಾಜ್ ತಮ್ಮ ಕೊರಳ ಚೈನು ಕಪ್ಪಾಗಿದ್ದು, ಪಾಲಿಷ್ ಮಾಡಿಕೊಡಿ ಎಂದು ಖರ್ಚಿನ ವಿವರ ಕೇಳಿದ್ದಾರೆ. ಮಾತುಕತೆ ಮುಗಿದ ತಕ್ಷಣ ಭಾನು ತಮ್ಮ ಕೊರಳಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರ ಹಾಗೂ ಪರ್ವಿನ್ ತಾಜ್ 11 ಗ್ರಾಂ ಸರ ಕೊಟ್ಟಿದ್ದಾರೆ.
ಪಾಲಿಷ್ ಕೆಲಸ ಪ್ರಾರಂಭಿಸಿದಂತೆ ನಾಟಕ ಪ್ರಾರಂಭಿಸಿದ ಕಳ್ಳರು ಕೆಂಪು ದ್ರವ ಮಿಶ್ರಿತ ಸ್ಟೀಲ್ ಬಾಕ್ಸ್ ತೆಗೆದು ಅದನ್ನು ಬಿಸಿ ಮಾಡಿ ಕೊಡುವಂತೆ ಭಾನು ಅವರಿಗೆ ಸೂಚಿಸಿದ್ದಾರೆ. ಮಹಿಳೆ ಅಡುಗೆ ಮನೆ ಕಡೆಗೆ ಹೊಗುತ್ತಿದ್ದಂತೆ ಪ್ಲಾಸ್ಟಿಕ್ ಕವರ್ ಒಂದನ್ನು ಕೆಳಗೆ ಬೀಳಿಸಿದಂತೆ ಮಾಡಿ ಅದನ್ನು ನೀಡುವಂತೆ ಪರ್ವಿನ್ ತಾಜ್‌ಗೆ ಹೇಳಿದ್ದಾರೆ. ಇಬ್ಬರ ಗಮನ ಬೇರೆಡೆ ವಾಲಿದೆ ಎಂಬುದನ್ನು ಅರಿತು ತಕ್ಷಣವೇ ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದಾರೆ.
ಅರಸೀಕೆರೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ.