ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ನೀಡುತ್ತಿರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಜಿಲ್ಲಾ ವಾರ್ಷಿಕ ಮೀನುಗಾರಿಕೆ ಕ್ರಿಯಾ ಯೋಜನೆ ತಯಾರಿ ಕುರಿತಂತೆ ಸಭೆ ನಡೆಸಿ ಮಾತನಾಡಿದ ಅವರು ಮೀನು ಸಾಕಾಣಿಕೆ ಮಾಡಲು ಇಚ್ಚಿಸುವವರಿಗೆ ಇದರಲ್ಲಿರುವ ಆದಾಯ ಮತ್ತು ಅನುಕೂಲತೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿನ ಮೀನುಗಾರಿಕೆ ಅವಲಂಬಿತ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳು ಕ್ರಮಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಅಗತ್ಯವಿದ್ದಲ್ಲಿ ಪರಿಶೀಲಿಸಿ ಸಾಲ ನೀಡುವಂತೆ ಲೀಡ್ ಬ್ಯಾಂಕ್‍ನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶಿಸಿದರು.
ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಎಲ್ಲಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರುಗಳು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ವಿವೇಕ್ ಆರ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಸುಷ್ಮ ಜಿ.ಎಸ್., ಪ್ರೀತಾ ಎಂ.ಎಸ್., ಸುಮ ಕೆ.ಎಸ್., ಮಲ್ಲೇಶ್ ನಾಯಕ್ ಆರ್.ಎಸ್., ಕೃಷ್ಣ, ಮೀನುಗಾರಿಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಶಿವಶಂಕರ್, ಲೀಡ್ ಬ್ಯಾಂಕ್‍ನ ಸಹಾಯಕ ವ್ಯವಸ್ಥಾಪಕರಾದ ಹನುಮಂತಪ್ಪ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.