ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿ: ಜಿಲ್ಲಾಧಿಕಾರಿ

0

ಹಾಸನ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರುಡುತ್ತಿರುವ ಕೋವಿಡ್-19 ಸೋಂಕನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಅಗತ್ಯ ಹಾಗಾಗಿ ಪ್ರತಿಯೊಬ್ಬರೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಹಾಸನ ತಾಲ್ಲೂಕಿನ ಸಾಲಗಾಮೆಯ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿಂದು ಕಾಲು ಮತ್ತು ಬಾಯಿ ರೋಗ ನಿಯಂತ್ರಣದ ಮೊದಲನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ಸಹ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸರ್‍ನಿಂದ ಅಥವಾ ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರ ಒಡನಾಟದಲ್ಲಿರುವವರು ರೋಗಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ತಾವು ಸಹ ಇದುವರೆಗೆ ನಾಲ್ಕು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.
ನಾಳೆಯಿಂದಲೇ ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು. ರಾಜಸ್ವ ನಿರೀಕ್ಷಕರು, ವೈದ್ಯರು ಮತ್ತು ಸಿಬ್ಬಂದಿ ಸೇರಿ ರೈತರ ಮನವೊಲಿಸಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಸೂಚಿಸಿದರಲ್ಲದೆ, ಕೋವಿಡ್ ಪಾಸಿಟಿವ್ ಬಂದರೂ ಹೆದರುವ ಅಗತ್ಯವಿಲ್ಲ. ರೋಗಲಕ್ಷಣಗಳಿಲ್ಲದಿದ್ದರೆ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು ಎಂದು ಆರ್. ಗಿರೀಶ್ ಅವರು ಸಲಹೆ ನೀಡಿದರು.
ಪ್ರಾಥಮಿಕ ಹಚಿತದಲ್ಲಿ ಕೋವಿಡ್ ಸೋಂಕು ಪತ್ತೆಯಾಗುವ್ಯದರಿಂದ ಸೋಂಕಿತರ ಸಂಪರ್ಕಕ್ಕೆ ಬರುವವರನ್ನು ಎಚ್ಚರಿಸಲು ಸಾಧ್ಯ, ಒಮ್ಮೆ ಸೋಂಕು ಪತ್ತೆಯಾದರೆ ಹೃದ್ರೋಗ, ಬಿಪಿ, ಸಕ್ಕರೆ ಕಾಯಿಲೆ, ಕಿಡ್ನಿ ವೈಪಲ್ಯದಿಂದ ನರಳುತ್ತಿರುವವರಿಗೆ ತೀರ್ವ ತೊಂದರೆಯಾಗುತ್ತದೆ ಹಾಗಾಗಿ ಮೊದಲ ಹಂತದಲ್ಲಿಯೇ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಈಲ್ಲೆಯಲ್ಲಿ ಈವರೆಗೆ ಒಟ್ಟಾರೆ 20ಸಾವಿರ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 365 ಕ್ಕೂ ಹೆಚ್ಚು ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಜಿಲ್ಲಾಧಿಕಾರಿಯವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಸೀಲ್ದಾರ್ ಶಿವಶಂಕರಪ್ಪ, ಸಹಾಯಕ ನಿರ್ದೇಶಕರಾದ ಡಾ|| ವೆಂಕಟೇಶ್ ಮತ್ತು ಡಾ|| ಜಾನಕಿ ಮತ್ತು ಸಾಲಗಾಮೆ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ|| ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here