ರಾಜೀನಾಮೆ ನೀಡ್ತಿವಿ ಹೊರತು ಅನ್ಯಾಯ ಸಹಿಸಲ್ಲ ಎಂದ್ರು ಹಾಸನದ ಇಬ್ಬರು ಪ್ರಭಾವಿ ಶಾಸಕರು!

0

ಹಾಸನ: ನೇರ ನುಡಿ, ಹರಿತ ಭಾಷಣಗಳ ಮೂಲಕ ಗಮನ ಸೆಳೆದಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ರಾಜೀನಾಮೆ ನೀಡುತ್ತೇವೆ ಹೊರತು ಅನ್ಯಾಯ ಸಹಿಸುವುದಿಲ್ಲ ಎನ್ನುವ ಮೂಲಕ ಅಧಿಕಾರಿಗಳ ಬೆವರಿಳಿಸಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ವೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಮಾತನಾಡಿದ ಎಚ್.ಡಿ. ರೇವಣ್ಣ, ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆ ಮುಕ್ಕಾಲು ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ. ಈ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸುತ್ತೇನೆ, ಸುಳ್ಳಾಗಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುಡುಗಿದರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ 6 ರೈಲ್ವೆ ಮೇಲ್ವೇತುವೆ ಮಂಜೂರು ಮಾಡಿಸಿದ್ದೆ. ಹೊಸ ಬಸ್ ನಿಲ್ದಾಣ ಸಮೀಪದ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಪ್ರಗತಿ ಕಂಡಿಲ್ಲ. ನಾನು ಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅವ್ಯಾಹತ ಲೂಟಿ ನಡೆಯುತ್ತಿದೆ. ಸರ್ಕಾರಿ ಭೂಮಿ ವಾಪಸ್ ಪಡೆಯಲು ನೋಟಿಸ್ ಯಾಕೆ ನೀಡಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತನಾಡಿ, ಅರಸೀಕೆರೆಯಿಂದ ಶಿವಮೊಗ್ಗ ವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ನಾನು ಕಂಟ್ರಾಕ್ಟರ್ ಕಂ ಎಂಎಲ್‌ಎ ಎಂಬುದನ್ನು ಮರೆಯಬೇಡಿ. ಎಷ್ಟು ಜಲ್ಲಿ, ಮರಳು, ಸಿಮೆಂಟ್ ಹಾಕುತ್ತಿದ್ದೀರಿ ಎಂಬುದು ಗೊತ್ತಾಗಿದೆ. ಕೆಲಸ ಮುಗಿಯಲಿ ಆ ಮೇಲೆ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ನಾನು ಮಾಡುತ್ತಿರುವ ಆರೋಪ ಸುಳ್ಳಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದರು.

LEAVE A REPLY

Please enter your comment!
Please enter your name here