ಶಿಕ್ಷಣ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ, ವರ್ಗದವರಿಗೆ ಅನ್ಯಾಯ

0

ತನಿಖೆ ಮಾಡಿಸಿ ಇನ್ನೊಂದು ತಿಂಗಳಲಿ ನ್ಯಾಯ ಕೊಡಿಸದಿದ್ರೆ ಹೋರಾಟ: ಡಿ. ಶಿವಶಂಕರ್

ಹಾಸನ : ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಎ.ವಿ.ಕೆ ಪ್ರಥಮ ದರ್ಜೆ ಕಾಲೇಜು, ಮಲೆನಾಡು ಇಂಜಿನಿಯರಿಂಗ್ ಕಾಲೇಜು, ಎಂ.ಕೃಷ್ಣ ಕಾನೂನು ಕಾಲೇಜು ಮತ್ತು ಎ.ವಿ.ಕೆ ಪದವಿಪೂರ್ವ ಕಾಲೇಜು ನಡೆಯುತ್ತಿದ್ದು, ಈ ಎಲ್ಲಾ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ವರ್ಗದವರಿಗೆ ಅನ್ಯಾಯ ಎಸಗಿದ್ದು, ಕೂಡಲೇ ಅನ್ಯಾಯ ಮತ್ತು ಅಕ್ರಮವನ್ನು ತನಿಖೆ ಮಾಡಿಸಿ ಸರಿಪಡಿಸಬೇಕು. ಇನ್ನೊಂದು ತಿಂಗಳಲ್ಲಿ ನ್ಯಾಯ ಕೊಡಿಸಿದೇ ವಿಳಂಬ ದೋರಣೆ ಅನುಸರಿಸಿದರೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಎಚ್ಚರಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ಕಾಲೇಜು ಸರ್ಕಾರದ ಅನುದಾನಕ್ಕೆ ಒಳಪಟ್ಟಿರುತ್ತವೆ. ಸರ್ಕಾರದ ಸಹಾಯಾನದಾನಕ್ಕೆ ಒಳಪಟ್ಟ ಕಾಲೇಜುಗಳಲ್ಲಿ ಸರ್ಕಾರದ ಆದೇಶ ಮತ್ತು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಆದರೆ ಈ ಕಾಲೇಜುಗಳಲ್ಲಿ ಸರ್ಕಾರದ ಆದೇಶ ಮತ್ತು ನೀತಿ ನಿಯಮಗಳನ್ನು ಪಾಲಿಸದೇ ಸ್ವಚ್ಚಚಾರದ ಆಡಳಿತ ನೀಡುತ್ತಿದೆ. ದಲಿತ ನೌಕರರು ಮತ್ತು ದಲಿತ ವಿದ್ಯಾರ್ಥಿಗಳನ್ನು ಗುರಿಮಾಡಿಕೊಂಡು ದಲಿತ ವಿರೋದಿ ನೀತಿಯನ್ನು ಅನುಸರಿಸಿ ದಲಿತ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಕಿರುಕುಳವನ್ನು ನೀಡುತ್ತಿದ್ದು, ಈ ಬಗ್ಗೆ ಸರ್ಕಾರವು ಮಧ್ಯಪ್ರವೇಶ ಆಡಳಿತ ಮಂಡಳಿ ಎಸಗಿರುವ ಅನ್ಯಾಯ ಮತ್ತು ಅಕ್ರಮಗಳ ಬಗ್ಗೆ ತನಿಖೆ ಮಾಡಿ ಅನ್ಯಾಯವನ್ನು ಸರಿಪಡಿಸಿಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಮನ್ವಯ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತದೆ. 

ಆಡಳಿತ ಮಂಡಳಿಯು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಅನ್ಯಾಯ ಮತ್ತು ಅಕ್ರಮವನ್ನು ಎಸಗಿರುತ್ತದೆ. ಎ.ವಿ.ಕೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ತಮ್ಮಯ್ಯ ಇವರಿಗೆ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳು ಪರಿಶಿಷ್ಟ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಕಿರುಕುಳ ನೀಡಿದ್ದು, ಇದರಿಂದ ಮಾನಸಿಕವಾಗಿ ತಮ್ಮಯ್ಯ ಇವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಇವರ ಆತ್ಮಹತ್ಯೆ ಪ್ರಯತ್ನಕ್ಕೆ ಆಡಳಿತ ಮಂಡಳಿಯೇ ನೇರ ಹೊಣೆ ಆಗಿರುತ್ತದೆ ಎಂದು ದೂರಿದರು.

  ಎ.ವಿ.ಕೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಹಿಂದೆ ಜೇಷ್ಟತೆಯಲ್ಲಿ ಹಿರಿತನ ಹೊಂದಿದ್ದ, ಪರಿಶಿಷ್ಟ ಜಾತಿಯ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಂಗಯ್ಯ ಇವರಿಗೂ ಸಹ ಪ್ರಾಂಶುಪಾಲರ ಹುದ್ದೆಯನ್ನು ನೀಡದೇ, ಪ್ರಾಂಶುಪಾಲರ ಹುದ್ದೆಯನ್ನು ನಿರಾಕರಿಸುತ್ತೇನೆ ಎಂದು ಬಲಾತ್ಕಾರದಿಂದ ಮುಚ್ಚಳಿಕೆ ಬರೆಸಿಕೊಂಡು ಸೇವಾ ಜೇಷ್ಟತೆಯಲ್ಲಿ ಕಿರಿಯರಾದ ಮೇಲ್ವರ್ಗದ ಸಹಾಯಕ ಪ್ರಾಧ್ಯಾಪಕರಿಗೆ ಪ್ರಾಂಶುಪಾಲರ ಹುದ್ದೆಯ ಪ್ರಭಾರ ನೀಡಿ ಪರಿಶಿಷ್ಟ ಜಾತಿಯ ನಿಂಗಯ್ಯರವರಿಗೆ ಅನ್ಯಾಯ ಎಸಗಲಾಗಿರುತ್ತದೆ ಎಂದರು. 

ಎಲ್ಲಾ ಅನ್ಯಾಯ ಮತ್ತು ಅಕ್ರಮಗಳು ಈ ಹಿಂದೆ ಉಚ್ಚನ್ಯಾಯಾಲಯದಲ್ಲಿ ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಆಗಿದ್ದ ಅಶೋಕ ಹಾರನಹಳ್ಳಿಯವರ ನೇತೃತ್ವದ ಸಂಸ್ಥೆಗಳಲ್ಲಿಯೇ ನಡೆಯುತ್ತಿದೆ. ಅವರ ಅಧಿಕಾರಾವಧಿಯಲ್ಲಿ ಕಾಲ ಕಾಲಕ್ಕೆ ಸರ್ಕಾರಿ ಆದೇಶಗಳ ಪಾಲನೆ ಮಾಡುವ ಬಗ್ಗೆ ಸರ್ಕಾರಕ್ಕೆ ಸಲಹೆ ಕೊಟ್ಟವರು. ಇವರೇ ಸರ್ಕಾರದ ಆದೇಶ ಮತ್ತು ನೀತಿ ನಿಯಮಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದ್ದಾರೆ ಹಾಗೂ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುತ್ತಿಲ್ಲ. 

ಆದುದರಿ೦ದ ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಉನ್ನತ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ, ತನಿಖೆ ಮಾಡಿಸಿ ಆಡಳಿತ ಮಂಡಳಿಯು ಹಿಂದಿನಿಂದಲೂ ದಲಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ಅಕ್ರಮವನ್ನು ಸರಿಪಡಿಸಿ ಸಾಮಾಜಿಕ ನ್ಯಾಯವನ್ನು ಒದಗಿಸಲು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು. ಒಂದು ವೇಳೆ ಸರ್ಕಾರ ಮತ್ತು ಆಡಳಿತ ಮಂಡಳಿಯು ಸಾಮಾಜಿಕ ನ್ಯಾಯ ನೀಡಲು ವಿಳಂಭ ದೋರಣೆ ಅನುಸರಿಸಿದರೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಜೊತೆಗೂಡಿ ರಾಜ್ಯಾಧ್ಯಂತ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

  ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಮನ್ವಯ ಸಮಿತಿಯು ಜಿಲ್ಲಾಧ್ಯಕ್ಷ ವೆಂಕಟೇಶ್, ರಾಜ್ಯ ಉಪಾಧ್ಯಕ್ಷ ಆರ್. ಮೋಹನ್, ಕೆಂಪ ಸಿದ್ದಯ್ಯ, ಲೋಕೇಶ್ಮ ಶಿವಕುಮಾರ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here