ಹಾಸನದಲ್ಲಿ ಮತ್ತೆ ಸದ್ದು ಮಾಡಿದ ಬಂದೂಕು
ಗುಂಡಿನ ದಾಳಿಗೆ ಯುವಕ ಬಲಿ

0

ಶಿಕಾರಿ ವೇಳೆ ಸಿಡಿದ ಗುಂಡಿಗೆ ಯುವಕ ಬಲಿ

ಬೇಲೂರು: ಬೇಟೆಗೆ ಹೋಗಿದ್ದ ವೇಳೆ ಆಕ್ಸ್ಮಿಕವಾಗಿ ಸಿಡಿದ ಗುಂಡು ತಗಲು ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಕುಶಾವರ ಗ್ರಾಮದಲ್ಲಿ ನಡೆದಿದೆ.
ಕುಶಾವರದ ಮಧು ಮೃತಪಟ್ಟ ಯುವಕ.

ಐಟಿಐ ಓದಿಕೊಂಡಿದ್ದ ಮಧು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಲಾಕ್ಡೌನ್ನಿಂದಾಗಿ ಸ್ವಗ್ರಾಮಕ್ಕೆ ಬಂದು ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ತಂದೆಯ ನಾಲ್ಕು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆಯಲ್ಲಿ ಶುಂಠಿ ಬೆಳೆದಿದ್ದ. ಭಾನುವಾರ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಮಧ್ಯಾಹ್ನ 1.30ರ ವೇಳೆಗೆ ಸ್ನೇಹಿತರು ಕರೆ ಮಾಡಿದ್ದಾರೆ. ಕೂಡಲೇ ಕೆಲಸ ನಿಲ್ಲಿಸಿ ಮನೆಗೆ ತೆರಳಿದ ಮಧು, ಬೇಲೂರಿಗೆ ಹೋಗಿ ಬರುತ್ತೇನೆಂದು ತಾಯಿಗೆ ಹೇಳಿ ಬೈಕಿನಲ್ಲಿ ತೆರಳಿದ್ದ.
ಶಿಕಾರಿಗೆ ಹೋಗಿದ್ದಾಗ ಅವಘಡ

ನಂತರ ಕೋಗಿಲಮನೆಯಲ್ಲಿ ಬೈಕ್ ನಿಲ್ಲಿಸಿ ಸ್ನೇಹಿತರಾದ ಬಿಕ್ಕೋಡು ಗ್ರಾಮದ ಸಾಂಗ್ಲಿಯಾನ, ಮಲ್ಲಿಕಾರ್ಜುನ ಸೇರಿ ಸುಮಾರು 10 ಮಂದಿ ಗೆಳೆಯರ ಜೊತೆ ಬಂದೂಕು ಹಿಡಿದು 3.30 ರ ಸುಮಾರಿಗೆ ಕಲ್ಲಹಳ್ಳಿ ಅರಣ್ಯಕ್ಕೆ ಶಿಕಾರಿಗೆ ಹೋಗಿದ್ದರು. ಈ ವೇಳೆ ಬಂದೂಕುನಿಂದ ಹಾರಿದ ಗುಂಡು ಮಧುಗೆ ತಗುಲಿದೆ.

ಇದನ್ನು ಕಂಡ ಜೊತೆಯಲ್ಲಿದ್ದ ಕೆಲವರು ಪರಾರಿಯಾಗಿದ್ದರೆ, ಸಾಂಗ್ಲಿಯಾನ ಮತ್ತು ಮಲ್ಲಿಕಾರ್ಜುನ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಧುನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹಣ ಕಟ್ಟಿ ಎಸ್ಕೇಪ್ ಆಗಿದ್ದಾರೆ.

ಕೆಲ ಹೊತ್ತಿನಲ್ಲೇ ಮೃತಪಟ್ಟ:
ರಾತ್ರಿಯಾದರೂ ಮಗ ಮನೆಗೆ ಬಾರದೇ ಇದ್ದಾಗ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದರು. ಈ ವೇಳೆ ಮಧುವಿಗೆ ಗುಂಡೇಟಿನಿಂದ ಗಾಯವಾಗಿ ಹಾಸನ ಆಸ್ಪತ್ರೆಗೆ ಸೇರಿಸಿರುವ ಮಾಹಿತಿ ಪೋಷಕರಿಗೆ ಲಭ್ಯವಾಗಿದೆ. ಕೂಡಲೇ ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ಮಧು ಸಾವನ್ನಪ್ಪಿದ್ದ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ತನಿಖೆಗೆ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಇದೇ ತಾಲೂಕಿನ ಇಬ್ಬೀಡು ಬಳಿ ಶಿಕಾರಿಗೆ ತೆರಳಿದ್ದ ಸಂದರ್ಭದಲ್ಲೇ ಸ್ನೇಹಿತರು ಪರಸ್ಪರ ಜಗಳವಾಡಿಕೊಂಡು ಓರ್ವ ಬಲಿಯಾಗಿದ್ದ.

LEAVE A REPLY

Please enter your comment!
Please enter your name here