ಹಾಸನಾಂಬೆ ದರ್ಶನ ಸಂತಸ ನೀಡಿದೆ: ಕೆ. ಗೋಪಾಲಯ್ಯ

0

ಹಾಸನಾಂಬೆ ಜಾತ್ರೆಯ ಆರಂಭದ ದಿನ ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲೇ ಹಾಜರಿದ್ದು ದರ್ಶನ ಪಡೆದಿದ್ದು ಸಂತಸ ನೀಡಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಹೇಳಿದ್ದಾರೆ.
ಹಾಸನಾಂಬ ದೇವಸ್ಥಾನ ಮತ್ತು ಸಿದ್ದೇಶ್ವರ ದೇವಸ್ಥಾನದ ಭೇಟಿಯ ನಂತರ ದೇವಾಲಯದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಪ್ರತಿವರ್ಷದಂತೆ ಈ ವರ್ಷವೂ ಸಂಪ್ರದಾಯಗಳಿಗೆ ಲೋಪ ಉಂಟಾಗದಂತೆ ದರ್ಶನೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.

ಕೊರೋನಾ ಸೋಂಕು ವ್ಯಾಪಕವಾಗಿ ಸಮುದಾಯದಲ್ಲಿ ಹರಡುತ್ತಿರುವ ಕಾರಣಾರ್ಥವಾಗಿ ಮುನ್ನೇಚ್ಚರಿಕೆಯಿಂದ ಜಿಲ್ಲೆಯ ಮತ್ತು ಹೊರ ಜಿಲ್ಲೆಯಿಂದ ಬರುವ ಭಕ್ತಾಧಿಗಳಿಗೆ ಈ ಬಾರಿ ಹಾಸನಾಂಬ ದೇವಾಲಯದ ದರ್ಶನಕ್ಕೆ ಅವಕಾಶವನ್ನು ನಿರ್ಬಂಧಿಸಲಾಗಿದೆ, ದೇವಾಲಯದ ಬಳಿ ಬಂದಿರುವ ಸಾರ್ವಜನಿಕರು ಹೊರಗಿನಿಂದಲೇ ದೇವಿಗೆ ನಮಸ್ಕರಿಸಿ ಆಶಿರ್ವಾದ ಪಡೆಯುವ ಮೂಲಕ ಸಹಕರಿಸಬೇಕೆಂದು ಸಚಿವರಾದ ಕೆ. ಗೋಪಾಲಯ್ಯ ಅವರು ಮನವಿ ಮಾಡಿದರು.
ಇಂದು 12:30ಕ್ಕೆ ಜಿಲ್ಲಾಡಳಿತದಿಂದ ಸಕಲ ಗೌರವ ಹಾಗೂ ಪದ್ದತಿಯಂತೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಬಾಗಿಲು ತೆರೆದ ಸಂದರ್ಭದಲ್ಲಿ ಗರ್ಭಗುಡಿಯ ಎರಡು ದೀಪಗಳು ಉರಿಯುತ್ತಿತ್ತು. ತಾಯಿಯ ಆಶಿರ್ವಾದದಿಂದ ಕೊರೋನಾ ಸೋಂಕು ಬೇಗ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಚಿವರು ಹೇಳಿದರಲ್ಲದೆ, ನ.16 ರಂದು ಮಧ್ಯಾಹ್ನ 12 ಗಂಟೆಗೆ ವಿಧಿ ವಿಧಾನಗಳ ಮೂಲಕ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು ಎಂದರು.

ಜಿಲ್ಲೆಯ ಮತ್ತು ರಾಜ್ಯಾದ್ಯಂತ ಇರುವ ಹಾಸನಾಂಬೆ ಭಕ್ತಾಧಿಗಳಿಗೆ ದೇವಿಯ ದರ್ಶನವನ್ನು ಯೂಟ್ಯೂಬ್ ಮತ್ತು ಫೇಸ್‍ಬುಕ್‍ಗಳ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ದೇವಸ್ಥಾನದ ಮುಂಭಾಗ ಮತ್ತು ನಗರದ ಹಲವು ವೃತ್ತಗಳಲ್ಲಿ ಎಲ್.ಇ.ಡಿ.ಗಳನ್ನು ಅಳವಡಿಸಿ ದೇವಿಯ ಎಲ್ಲಾ ಪೂಜಾ ಕೈಂಕರ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂದು ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಮಾಧುಸ್ವಾಮಿ ಅವರು ಮಾತನಾಡಿ ಕೊರೊನಾ ಹಾವಳಿ ಹಿನ್ನೇಲೆಯಲ್ಲಿಯೂ ಈ ವರ್ಷ ದರ್ಶನ ಪಡೆದಿದ್ದೇನೆ. ದೇವಿಯ ಆಶಿರ್ವಾದದಿಂದ ದೇಶ-ರಾಜ್ಯ ಕೊರೋನಾ ಸೋಂಕಿನಿಂದ ಮುಕ್ತವಾಗಲಿ ಎಂದು ಸಂಕಲ್ಪ ಮಾಡಿರುವುದಾಗಿ ಹೇಳಿದರು.
ಕೊರೋನಾದ ಕಾರಣದಿಂದ ಈ ಬಾರಿ ಸಾರ್ವಜನಿಕರು ದೇವಸ್ಥಾನಕ್ಕೆ ಅವಕಾಶ ಇಲ್ಲದಿರುವ ಬಗ್ಗೆ ನೋವಿದೆ ಆದರೆ ಅದು ಅನಿವಾರ್ಯ ಹಾಗಾಗಿ ಭಕ್ತರು ನೇರ ಪ್ರಸಾರದ ಮೂಲಕವೇ ಹಾಸನಾಂಬ ದೇವಿಯ ದರ್ಶನ ಪಡೆಯುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಚಿವರು ಭಕ್ತಾಧಿಗಳಿಗೆ ಮನವಿ ಮಾಡಿದರು.

ಶಾಸಕರಾದ ಪ್ರೀತಂ ಜೆ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಹೆಚ್.ಕೆ. ಸ್ವರೂಪ್ ಸೇರಿದಂತೆ ಮತ್ತೀತರ ಸ್ಥಳಿಯ ಜನಪ್ರತಿನಿಧಿಗಳು ಸಹ ಹಾಸನಾಂಬೆಯ ದರ್ಶನ ಪಡೆದರು.
ಸ್ಥಳದಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ, ಉಪವಿಭಾಗಾಧಿಕಾರಿಗಳಾದ ಬಿ.ಎ. ಜಗದೀಶ್ ಮತ್ತು ಗಿರೀಶ್ ನಂದನ್, ತಹಶೀಲ್ದಾರ್ ಶಿವಶಂಕರಪ್ಪ ಮತ್ತಿತರರಿದ್ದರು.


LEAVE A REPLY

Please enter your comment!
Please enter your name here