ಹಾಸನ: ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದು, ತೀವ್ರ ನಷ್ಟ ಅನುಭವಿಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೋಮವಾರ ಸಂಜೆ ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಕಾಫಿ ಬೆಳೆ ಪ್ರದೇಶದಲ್ಲಿ ಬಿರುಸಿನ ಮಳೆ ಸುರಿದಿದ್ದು, ಮಂಗಳವಾರವೂ ಚದುರಿದಂತೆ ಮಳೆಯಾಗಿದೆ. ಇದರಿಂದ ಕಾಫಿ ಕೊಯ್ದು, ಸಂಸ್ಕರಣೆಯ ಹಂತದಲ್ಲಿ ತೊಡಗಿಕೊಂಡಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.
ಅರೇಬಿಕಾ ಕಾಫಿ ಕೊಯ್ದು ಕಾರ್ಯ ಬಿರುಸಿನಿಂದ ಸಾಗಿದ್ದು, ಬಹುತೇಕ ತೋಟಗಳಲ್ಲಿ ಕೊನೆ ಹಂತದ ಕೊಯ್ಲಿಗೆ ಹಣ್ಣು ಸಿದ್ಧವಾಗಿವೆ. ಕಾರ್ಮಿಕರ ಕೊರತೆಯಿಂದಾಗಿ ಕೆಲವು ಬೆಳೆಗಾರರು ನಿರೀಕ್ಷಿತ ವೇಗದಲ್ಲಿ ಕಾಫಿ ಫಸಲು ಕೊಯ್ದು ಮಾಡಿಸಲು ಸಾಧ್ಯವಾಗುತ್ತಿಲ್ಲ.
ಇಂತಹ ಸಮಯದಲ್ಲಿ ದಿಢೀರ್ ಆರಂಭವಾಗಿರುವ ಮಳಿ ಹಾಗೂ ಮುಂದುವರಿದಿರುವ ಮೋಡ ಕವಿದ ವಾತಾವರಣಗಳಿಂದ ಕೊಯ್ದು ಹಾಗೂ ಕಾಫಿ ಬೇಳೆ ಒಣಗಿಸುವ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯ ನಿರೀಕ್ಷೆಯಿಲ್ಲದೆ ಪಲ್ಟರ್ ಮಾಡಿದ್ದ ಬೇಳೆಯನ್ನು ಒಣಗಲು ಹಾಕಿದ್ದ ಬೆಳೆಗಾರರು ಸೋಮವಾರ ರಾತ್ರಿ ಸುರಿದ ಮಳೆಯಲ್ಲಿ ವರ್ಷದ ಫಸಲು ಕೊಚ್ಚಿ ಹೋಗದಂತೆ ಕಾಪಾಡಿಕೊಳ್ಳಲು ಕತ್ತಲಿನಲ್ಲಿ ಪರದಾಡಿದ್ದಾರೆ.
ಮಳೆ ಹಾಗೂ ಮೋಡ ಕವಿದ ತಂಪು ವಾತಾವರಣ ಮುಂದುವರಿಯುತ್ತಿರುವುದರಿಂದ ಕಾಫಿ ಸರಿಯಾಗಿ ಒಣಗದೆ ಗುಣಮಟ್ಟ ಕುಸಿಯುತ್ತದೆ.
ಕಾರ್ಮಿಕರ ಕೊರತೆಯ ನಡುವೆಯೇ ದುಬಾರಿ ಎನ್ನಿಸುವಷ್ಟು ಕೂಲಿ ನೀಡಿ ಬೆಳೆ ಕೊಯ್ಲು ಮಾಡಿಸುತ್ತಿರುವ ಬೆಳೆಗಾರರು ಮಳೆಯಿಂದಾಗಿ ಅನಿವಾರ್ಯವಾಗಿ ಕೆಲಸ ನಿಲ್ಲಿಸಬೇಕಾಗಿದೆ. ಇದರಿಂದ ಈಗಾಗಲೇ ಹಣ್ಣಾಗಿರುವ ಕಾಫಿ ಉದುರುವುದನ್ನು ಅಸಹಾಯಕರಾಗಿ ನಿಂತು ನೋಡಬೇಕಾಗಿದೆ.
ಮಳೆ ಸುರಿದ ಸಮಯದಲ್ಲಿ ಕೊಯ್ದು ಕಾರ್ಯ ವೇಗವಾಗಿ ಸಾಗದಿರುವುದರಿಂದ ಬೆಳೆಗಾರರಿಗೆ ಕೂಲಿ ವೆಚ್ಚವೂ ಹೆಚ್ಚಾಗುತ್ತಿದೆ. ಇದು ಒಟ್ಟಾರೆ ಉತ್ಪಾದನೆಯ ಖರ್ಚು ಏರಿಕೆ ಮಾಡಲಿದೆ. ಉದುರಿ ಬೀಳುವ ಕಾಫಿಯನ್ನು ಹೆಕ್ಕಿಸಲು ಬೆಳೆಗಾರರು ಹೆಚ್ಚುವರಿಯಾಗಿ ಕೂಲಿ ನೀಡಬೇಕಾಗುತ್ತದೆ. ಇದರ ಪರಿಣಾಮವಾಗಿ ಈ ವರ್ಷ ಉತ್ತಮ ಫಸಲು ಪಡೆದಿರುವವರೂ ನಷ್ಟದ ಚಕ್ರಕ್ಕೆ ಸಿಲುಕುವ ಆತಂಕ ಎದುರಾಗಿದೆ. ಇನ್ನೂ ಮೂರಾಲ್ಕು ದಿನಗಳು ಮಳೆ ಮುಂದುವರಿಯುವುದಾಗಿ ಹವಾಮಾನ ಮುನ್ಸೂಚನೆ ದೊರಕಿರುವುದು ಮಲೆನಾಡಿನ ಬೆಳೆಗಾರರ ಆತಂಕ ಹೆಚ್ಚಿಸಿದ್ದು, ಬೆಳೆ ಉಳಿಸಿಕೊಳ್ಳಲು ಮಳೆಯಲ್ಲಿಯೇ ಕೊಯ್ದು, ಪಲ್ಸರ್ನಂತಹ ಕೆಲಸಗಳನ್ನು ಮುಂದುವರಿಸಲು ಹರಸಾಹಸ ಪಡುತ್ತಿದ್ದಾರೆ.
ಮಳೆಯಿಂದಾಗಿ ಕಣದಲ್ಲಿ ಹರವಿರುವ ಕಾಫಿ ಒಣಗುತ್ತಿಲ್ಲ, ತೋಟದಲ್ಲಿ ಹಣ್ಣು ಉದುರುತ್ತಿವೆ. ಈಗ ಕೊಯ್ದು ಮಾಡಲು ಹೆಚ್ಚು ಕಾರ್ಮಿಕರ ಅಗತ್ಯ ಬೀಳುತ್ತಿದೆ. ಇದರಿಂದ ಕೊಯ್ಲಿನ ವೆಚ್ಚ ಜಾಸ್ತಿಯಾಗುತ್ತದೆ. ಮೊದಲೇ ಸಮಸ್ಯೆಯಲ್ಲಿರುವ ನಾವು ಇನ್ನಷ್ಟು ತೊಂದರೆಗೆ ಸಿಲುಕಿದಂತಾಗುತ್ತದೆ.