ಜೆಸಿಟಿಯು ಪ್ರತಿಭಟನೆ
ಹಾಸನ: ಕೆಂದ್ರ ಸರಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಪ್ರತಿಭಟನೆ ನಡೆಸಿ, ಪ್ರಧಾನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಎಂ.ಸಿ. ಡೋಂಗ್ರೆ ಮತ್ತು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಅವರು ಮಾತನಾಡಿ, ಕೇಂದ್ರದ ೯ ವರ್ಷಗಳ ಬಿಜೆಪಿ ಸರ್ಕಾರದ ಕಡೆ ನೋಡಿದರೆ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮೇಲೆ ಮರಣಾಂತಿಕ ದಾಳಿಯನ್ನು ಎಸೆಗಿರುವುದು ನಮಗಿಂದು ವೇದ್ಯವಾಗುತ್ತಿದೆ.
ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರ ನೀಡಿದೆ. ನಿರುದ್ಯೋಗ ಪೆಡಂಭೂತದಂತೆ ಹೆಚ್ಚುತ್ತಿದೆ. ನೋಟುಗಳ ಅಮಾನ್ಯಕರಣದ ತರುವಾಯ ಜನರು ಅಂಚಿಗೆ ತಳ್ಳಲ್ಪಟ್ಟರು ಕಪ್ಪು ಹಣ ಬಿಳಿಯಾಯಿತೇ ವಿನಹ ಇನ್ನೇನು ಆಗಿಲ್ಲ. ಈ ಕುರಿತು ಸತ್ಯ ಹೊರಬರಲು ಕೇಂದ್ರ ಸರಕಾರ ಶ್ವೇತಾ ಪತ್ರ ಹೊರಡಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಬಡತನದ ಹೆಚ್ಚಳವಾಗಿ ಆರ್ಥಿಕ ಕುಸಿತ ತಲೆದೋರಿದ್ದು, ನಿರುದ್ಯೋಗ ಹೆಚ್ಚಳದಿಂದಾಗಿ ಯುವಕರು ಹತಾಶರಾಗಿದ್ದಾರೆ. ಅಸಹನೀಯವಾದ ಬೆಲೆ ಏರಿಕೆ ಒಂದೆಡೆಯಾದರೆ ವೇತನ ಹೆಚ್ಚಳವಿಲ್ಲದೆ ನಿರ್ಗತಿಕತನದಿಂದಾಗಿ ಹಸಿವಿನ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ.
ಸಾರ್ವಜನಿಕ ಉದ್ದಿಮೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾಡಲಾಗುತ್ತಿದ್ದು, ಅವರು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿಯನ್ನು ಮಾಡಿಕೊಂಡು ಶಾಸನಬದ್ಧ ಸೌಲಭ್ಯಗಳಾದ ಪಿಎಫ್, ಇಎಸ್‌ಐ ಮತ್ತು ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಕೋಪಿಡ್ ಸಾಂಕ್ರಾಮಿಕ ಪಿಡುಗಿನ ತರುವಾಯ ಜೀವನೋಪಾಯವೇ ಸಂಕಷ್ಟದಲ್ಲಿರುವಾಗ ಮತ್ತೆ ಸರಿದಾರಿಗೆ ತರಲು ಮದ್ಯ ಪ್ರವೇಶಿಸಬೇಕಾದ ಸರ್ಕಾರ ಕೈ ಚೆಲ್ಲಿದೆ. ದೆಹಲಿಯ ಹೊರವಲಯದಲ್ಲಿ ಒಂದು ವರ್ಷಗಳ ಕಾಲ ನಡೆದ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಅವರಿಗೆ ಕೊಟ್ಟ ಮಾತಿನಿಂದ ಹಿಂದೆ ಸರಿದು ನಂಬಿಕೆ ದ್ರೋಹ ಮಾಡಿ ವಚನಭ್ರಷ್ಟವಾಗಿದೆ ಎಂದು ಗಂಬೀರವಾಗಿ ಆರೋಪಿಸಿದರು.
ಸಮಸ್ಯೆಗಳು ಮುಗಿಲೆತ್ತರಕ್ಕೆ ಬೆಳೆದಿರುವಾಗ ಕಾರ್ಮಿಕ ವರ್ಗದ ಬೇಡಿಕೆಗಳಿಗೆ ಸ್ಪಂದಿಸದೆ ಕೇಂದ್ರ ಸರ್ಕಾರ ಬಹಿರಂಗವಾಗಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ನಿಂತಿದೆ. ಅವರಿಗೆ ಸಹಾಯ ಮಾಡಲು ಇತ್ತೀಚೆಗೆ ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿ ತಂದು ದಿನದ ದುಡಿತದ ಅವಧಿಯನ್ನು ೧೨ ಗಂಟೆಗಳಿಗೆ ಹೆಚ್ಚಿಸಿದೆ.
ಕಾರ್ಮಿಕ ಸಮುದಾಯ ಹಲವಾರು ತ್ಯಾಗ ಬಲಿದಾನ ಹೋರಾಟಗಳಿಂದ ಗಳಿಸಿರುವ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ, ಲೇಬರ್ ಕೋಡನ್ನು ತರಲಾಗಿದೆ. ಇದು ಕಾರ್ಮಿಕ ವರ್ಗಕ್ಕೆ ಮಾರಕವಾಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ರಿಯಾಯಿತಿಗಳನ್ನು ಘೋಷಿಸಲಾಗಿದ್ದು, ಅವರ ಸಾಲಗಳನ್ನು ಮನ್ನಾಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅರವಿಂದ್, ಧರ್ಮರಾಜ್, ಸೌಮ್ಯ, ಮುಬಶಿರ್ ಅಹಮದ್ ಇತರೆ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.