ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ನ ಜಾವೆಲಿನ್ ಥ್ರೋ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದರು. ಅದೇ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂವರು ಅಥ್ಲೀಟ್ ಗಳು ಜಾವೆಲಿನ್ ಥ್ರೋ ನಲ್ಲಿ ಫೈನಲ್ ತಲುಪಿ ಇತಿಹಾಸ ಬರೆದಿದ್ದರು. ಅವರಲ್ಲಿ ಕನ್ನಡಿಗ ಡಿ.ಪಿ.ಮನು ಕೂಡ ಒಬ್ಬರು. ಈ ಮನು ಹಾಸನ ಜಿಲ್ಲೆಯ ಪ್ರತಿಭೆ. 23 ವರ್ಷದ ದೇವರ ಕೇಶವಿ ಪ್ರಕಾಶ್ ಮನು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದವರು.
ತಂದೆ ಪ್ರಕಾಶ್ ಮತ್ತು ತಾಯಿ ಸುಜಾತ ದಂಪತಿಯ ಇಬ್ಬರು ಗಂಡುಮಕ್ಕಳಲ್ಲಿ ಮಧು ಹಿರಿಯ ಮಗ. ಅಪ್ಪ ಕಾಪಿ ತೋಟದ ಕಾರ್ಯದಲ್ಲಿ ಇದ್ದರೆ, ತಮ್ಮ ಖಾಸಗಿ ಕಂಪನಿ ನೌಕರ. ಬೇಲೂರಿನ ಹೊಯ್ಸಳ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿದ್ದಾಗಲೇ ಜಾವೆಲಿನ್ ಥ್ರೋ ಮೇಲೆ ಪ್ರೀತಿ ಬೆಳೆಸಿಕೊಂಡವರು ಮನು, ಅವರ ತೋಳ್ಬಲ ಮತ್ತು ಪ್ರತಿಭೆ ಗುರುತಿಸಿದ್ದ ಶಾಲೆಯ ಶಿಕ್ಷಕ ನಂದೀಶ್ ಪ್ರೋತ್ಸಾಹ ನೀಡಿದರು. ಮುಂದೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿಕೊಂಡರು.
2018ರಲ್ಲಿ ಖೇಲೋ ಇಂಡಿಯಾದಲ್ಲಿ 76 ಮೀ ಹೆಚ್ಚು ದೂರ ಥ್ರೋ ಮಾಡಿದ್ದ ಮನು, ನಂತರ ಪುಣೆಯ ಡಿಫೆನ್ಸ್ ಅಕಾಡೆಮಿ ಕೋಚ್, ಕನ್ನಡಿಗ ಕಾಶೀನಾಥ್ ನಾಯ್ಕ ಅವರ ಕಣ್ಣಿಗೆ ಬಿದ್ದರು. ನಂತರ ಕಾಶೀನಾಥ್ ಅವರೇ ಮನುಗೆ ತರಬೇತಿ ನೀಡುತ್ತಿದ್ದಾರೆ. ನೀರಜ್ ಚೋಪ್ರಾ ಅವರಿಗೂ ಈ ಹಿಂದೆ ಕೆಲಕಾಲ ಕಾಶೀನಾಥ್ ತರಬೇತಿ ನೀಡಿದ್ದರು. ಇದೇ ವರ್ಷ ನಡೆದ ಏಷ್ಯನ್ ಗೇಮ್ ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದ ಮನು ಈಗ ವಿಶ್ವದ ಟಾಪ್ ಟೆನ್ ಜಾವೆಲಿನ್ ಥ್ರೋವರ್ ಗಳಲ್ಲಿ ಒಬ್ಬರು.