ನೀವೇನ್ ಮಾಡ್ತೀರೋ ಗೊತ್ತಿಲ್ಲ, ಸಾಲದ ಕಂತು ಮರುಪಾವತಿ ಮಾತ್ರ ಮಾಡಿಬಿಡಿ ! ವಿಶೇಷ ಲೇಖನ

1

ಲಾಕ್‌ಡೌನ್‌: ಸಾಲ ಮರುಪಾವತಿಗೆ ಸಂಕಷ್ಟ

ವಿಶೇಷ ಲೇಖನ: ಕಾಳಜಿಯ ಕನ್ನಡಿಗ ಜ಼ಮೀರ್ ಅಹಮದ್

ಕೋವಿಡ್ ಎರಡನೇ ಅಲೆಯ ಸಂಬಂಧ ಲಾಕ್‌ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಗಳು ಎದುರಾಗಿರುವುದು ಒಂದೇ ಎರಡೇ, ಹೇಳುವುದಕ್ಕೆ ಹೊರಟರೆ ಸಮಸ್ಯೆಗಳ ಸರದಿ ಸಾಲು ನಿಲ್ಲುತ್ತದೆ.

ಆರ್‌ಬಿಐ ವ್ಯಾಪ್ತಿಗೆ ಬರುವ ಬ್ಯಾಂಕುಗಳು, ವಿವಿಧ ಸಹಕಾರಿ ಸೊಸೈಟಿ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಮೊದಲಾದವುಗಳಲ್ಲಿ ಸಾಲ ಪಡೆದಿದ್ದವರಿಗೆ ಸಾಲದ ಕಂತು ಮರುಪಾವತಿ ಮಾಡಲಾರದ ಪರಿಸ್ಥಿತಿ ಎದುರಾಗಿದ್ದು ಇದರಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಕಳೆದ ವರ್ಷ ಕೊರೋನಾ ಕಾರಣಕ್ಕಾಗಿ ಲಾಕ್‌ಡೌನ್‌ ಮಾಡಲಾಗಿದ್ದ ಸಂದರ್ಭದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಎಲ್ಲಾ ಬಗೆಯ ಸಾಲದ ಕಂತು ಪಾವತಿಗೆ ಆಗಸ್ಟ್‌ ತಿಂಗಳವರೆಗೆ ವಿನಾಯಿತಿ ನೀಡಿತ್ತು. ಆದರೆ, ಈ ಬಾರಿ ಆರ್‌ಬಿಐ ಈವರೆಗೆ ಯಾವುದೇ ವಿನಾಯಿತಿ ಘೋಷಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡ ಇದರ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಇದರಿಂದ ತೊಂದರೆಯಾಗಿರುವುದು ಮಾತ್ರ ಜನಸಾಮಾನ್ಯರಿಗೆ.

ಸಾಲ ವಸೂಲಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬ್ಯಾಂಕ್‌ ಸಿಬ್ಬಂದಿಗಳು ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಕರೆ ಮಾಡಿ ಸಾಲದ ಕಂತು ಕಟ್ಟುವಂತೆ ಮೌಖಿಕ ಸೂಚನೆ ನೀಡುತ್ತಿರುವುದರ ಜೊತೆಗೆ ಒತ್ತಡ ಏರುತ್ತಿದ್ದಾರೆ. ಸಾಲದ ಕಂತು ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ ಎಂದರೂ ಫೈನಾನ್ಸ್ ಕಂಪನಿಯವರು ಕೇಳುತ್ತಿಲ್ಲ ಎಂದು ಸಾಲಗಾರರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಕಷ್ಟದಿಂದ ಎಲ್ಲೆಡೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜನರು ಜೀವನ ಮಾಡುವುದೇ ಕಷ್ಟವಾಗಿದೆ. ಲಾಕ್‌ಡೌನ್‌ ಕಾರಣದಿಂದಾಗಿ ಜನಸಾಮಾನ್ಯರು ಬರಿಗೈ ಆಗಿದ್ದಾರೆ. ಈಗಾಗಲೇ ಯಾವುದೇ ರೀತಿಯ ವ್ಯಾಪಾರ ವಹಿವಾಟುಗಳಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಸಾಲದ ಕಂತಿನ ಪಾವತಿ ಮಾಡುವುದಾದರು ಹೇಗೆ? ನಮಗೆ ಯಾವುದೇ ಆದಾಯ ಮೂಲ ಇಲ್ಲದಿರುವುದು ಸರ್ಕಾರಗಳಿಗೆ ಅಧಿಕಾರಿಗಳಿಗೆ ಯಾಕೆ ಅರ್ಥ ಆಗ್ತಾ ಇಲ್ಲ.

ಸಾಲದ ಕಂತು ಪಾವತಿ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರಕಾರ ಮತ್ತು ಆರ್‌ಬಿಐ ಸ್ಪಷ್ಟ ನಿರ್ದೇಶನ ನೀಡದಿರುವ ಹಿನ್ನೆಲೆಯಲ್ಲಿ ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳು, ಫೈನಾನ್ಸ್‌ ಕಂಪನಿಗಳು ವಸೂಲಿಗೆ ಮುಂದಾಗಿವೆ. ಇನ್ನೊಂದು ಕಡೆ ಸಾಲ ವಸೂಲಾತಿ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಹಕಾರಿ ಸಂಸ್ಥೆಗಳಿಗೂ ಗೊಂದಲ ಉಂಟಾಗಿದೆ. ಮತ್ತೊಂದೆಡೆ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲದ ಕಂತು ಕಟ್ಟಬೇಕೇ ಅಥವಾ ಕಟ್ಟಬಾರದೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಸ್ವಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳಲ್ಲಿ ದಿನಗೂಲಿ ನೌಕರರು ಮತ್ತು ರಾಜ್ಯದಾದ್ಯಂತ ಸುಮಾರು ಐದು ಲಕ್ಷಕ್ಕೂ ಅಧಿಕ ಬೀದಿ ಬದಿಯ ವ್ಯಾಪಾರಿಗಳೇ ಹೆಚ್ಚಿನದಾಗಿ ಸಾಲ ಮಾಡಿರುವವರು. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ನೋವು ಸರ್ಕಾರಗಳಿಗೆ ಯಾಕೆ ಅರ್ಥ ಆಗ್ತಾ ಇಲ್ಲ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಿಂದಿನ ವರ್ಷದಂತೆಯೇ ಸಾಲದ ಕಂತು ಪಾವತಿ ಅವಧಿಯನ್ನು ಕನಿಷ್ಠ 3 ತಿಂಗಳವರೆಗೆ ಮುಂದೂಡಬೇಕು ಎಂಬುದು ಸ್ವಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳ ಒತ್ತಾಯವಾಗಿದೆ. ಆದರೆ, ಸಹಕಾರಿ ಬ್ಯಾಂಕ್‌ಗಳಿಗೆ ಸಾಲದ ಕಂತು ಪಾವತಿ ಅವಧಿ ಮುಂದೂಡುವ ಅಧಿಕಾರವಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲೇ ನಿರ್ಧಾರವಾಗಬೇಕಿದೆ. ರಾಜ್ಯ ಸರ್ಕಾರ ಆದೇಶ ಹೊರಡಿಸಿ ಸಾಲ ಪಾವತಿ ಅವಧಿ ವಿಸ್ತರಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಸರ್ಕಾರ ಮಾತ್ರ ಜಾಣ ಮೌನ ವಹಿಸಿರುವುದು ಎಷ್ಟರಮಟ್ಟಿಗೆ ಸರಿ. ಸರ್ಕಾರದ ಯಾವುದೇ ನಿರ್ದೇಶನ ಮತ್ತು ಸಹಕಾರ ಸಿಗದಿರುವುದು ನಿಜಕ್ಕೂ ಶೋಚನೀಯ.

ಈಗಲಾದರು ರಾಜ್ಯ ಸರ್ಕಾರ ಜನಸಾಮಾನ್ಯರ ಬವಣೆಯನ್ನು ಅರ್ಥಮಾಡಿಕೊಂಡು ಎಚ್ಚೆತ್ತಕೊಂಡು ಸಾಲದ ಮರು ಪಾವತಿಗೆ ಕಾಲಾವಕಾಶ ಕೊಡುವಂತೆ ಕೇಂದ್ರ ಸರ್ಕಾರದ ಮೂಲಕ ಆರ್‌ಬಿಐ ಗಮನಕ್ಕೆ ತರಬೇಕಾಗಿದೆ.

Karnatakagovernment #karnatakaCm #Pubilcvoice

1 COMMENT

  1. ಜೀವನ ನರಕ ಆಗಿದೆ. ಯಾರು ಕೇಳೋರಿಲ್ಲ. ಮನೆ ಸಾಲ, ಅಂಗಡಿ ಸಾಲ ಎರಡರ ಈ ಎಂ ಐ ಕಟ್ಟಬೇಕು ಆದರೆ ಅಂಗಡಿ ತೆಗೆಯೋ ಹಾಗಿಲ್ಲ ಏನು ಮಾಡೋದು ಇಬ್ಬರು ಮಕ್ಕಳು ಹಾಗೂ ಹಿರಿಯರಿದ್ದಾರೆ ಮನೆ ಹೇಗೆ ನಡೆಸೋದು

LEAVE A REPLY

Please enter your comment!
Please enter your name here