ಪಥಮ ದರ್ಜೆ ಸಹಾಯಕ ಪರೀಕ್ಷೆಯನ್ನು ಯಾವುದೇ ಲೋಪದೋಷಗಳಾಗದಂತೆ ಎಚ್ಚರವಹಿಸಿ ನಡೆಸಿ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಎಫ್. ಡಿ. ಎ ಪರೀಕ್ಷಾ ಪೂರ್ವಸಿದ್ದತೆ ಕುರಿತು ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಇದೇ ತಿಂಗಳ 23 ಹಾಗೂ 24 ರಂದು ನಡೆಯುವ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣ ಹಾಗೂ ಕಾಫಿ ಚೀಟಿಗಳನ್ನು ತರದಂತೆ ಎಚ್ಚರ ವಹಿಸಿ ಎಂದು ಹೇಳಿದರು.
ಕೆಮ್ಮು, ಜ್ವರ,ಶೀತ ಹಾಗೂ ಕೋವಿಡ್ ಲಕ್ಷಣ ಇರುವ ವಿದ್ಯಾರ್ಥಿಗಳನ್ನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ಪ್ರತಿ ಕೊಠಡಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಿ, ಯಾವುದೇ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬರದಂತೆ ಎಚ್ಚರವಹಿಸಿ ನಂತರ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಓ. ಎಂ. ಆರ್ ಶೀಟ್‍ನಲ್ಲಿ ಸಹಿ ಮಾಡಿದ್ದಾರೆಯೆ ಎಂಬುದನ್ನು ಖಾತರಿ ಪಡಿಸಿಕೊಳ್ಳಿ ಎಂದು ಹೇಳಿದರು.
ಕರ್ನಾಟಕ ಲೋಕಸೇವಾ ಆಯೋಗ ಪರಿಕ್ಷಾ ನಿಯಂತ್ರಕರಾದ ಜಿ.ಆರ್.ಜೆ ವಿವ್ಯಾ ಪ್ರಭು ಅವರು ಮಾತನಾಡಿ ಯಾವ ವಿದ್ಯಾರ್ಥಿಗಳೂ ಆಸೆ ಆಮಿಷಕ್ಕೆ ಒಳಗಾಗದೆ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಿ ಎಂದರು.
ಮೇಲ್ವಿಚಾರಕರಾಗಲಿ ವಿದ್ಯಾರ್ಥಿಗಳಗಾಲಿ ಮೊಬೈಲ್‍ಗಳನ್ನೂ ಪರೀಕ್ಷಾ ಕೊಠಡಿಯೊಳಗೆ ತರದಂತೆ ಎಚ್ಚರವಹಿಸಿ, ವಿದ್ಯಾರ್ಥಿಗಳು ಅವರೇ ಮಾಸ್ಕ್, ಸ್ಯಾನಿಟೈಸರ್, ನೀರಿನ ಬಾಟಲಿ ತರಲು ಅವಕಾಶವಿದೆ ಹಾಗೂ ಪರೀಕ್ಷಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಧಿಕಾರಿ ಬಿ.ಎ ಜಗದೀಶ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪ್ರಕಾಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.