ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಹಾಗೂ ಭೂ ಮಾಲೀಕರಿಗೆ ಸಲ್ಲಬೇಕಾದ ಪರಿಹಾರವನ್ನು ನಿಯಮಾನುಸಾರ ಸಕಾಲದಲ್ಲಿ ಒದಗಿಸಿ ಕಾಮಗಾರಿಗಳನ್ನು ನಡೆಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸ್ಥಳೀಯ ರೈತಮುಖಂಡರನ್ನು ಭೇಟಿ ಮಾಡಿದ ಸಂದರ್ಭ ಅವರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ ರೈತರಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಇತರೆ ಸ್ಥಳೀಯ ರೈತಮುಖಂಡರು ಕಾಡಾನೆ ಹಾವಳಿ ಸೇರಿದಂತೆ ರೈತರ ಇತರೆ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿಯವರು ಕಾಡಾನೆ ಹಾವಳಿ ಸಂಬಂಧಿಸಿದಂತೆ ಶೀಘ್ರದಲ್ಲೇ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಾಗುವುದು ಹಾಗೂ ಈಗಾಗಲೇ ವನ್ಯ ಜೀವಿಗಳಿಂದಆಗಿರುವ ಹಾನಿಗೆ ಶೀಘ್ರವಾಗಿ ಸೂಕ್ತ ಪರಿಹಾರ ಒದಗಿಸಲು ಅರಣ್ಯ ಇಲಾಖೆಗೆ ತಿಳಿಸಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಳೆನರಸೀಪುರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆನಿಸ್, ರೈತ ಮುಖಂಡರುಗಳು ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.