ಹಾಸನ: ಅಧಿಕಾರಿ ವರ್ಗ ರೈತರ ವಿಚಾರದಲ್ಲಿ ಮೈ ಮರೆತ್ರೆ ಏನಾಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ. ರೈತರೊಬ್ಬರು ನಾಟಿ ಕೋಳಿ ಸಾಕೋ ಆಸೆಯಲ್ಲಿ ಸರ್ಕಾರದ ಯೋಜನೆ ಅಡಿಯಲ್ಲಿ ಕೋಳಿ ಮರಿ ತಂದಿದ್ದರು. ಅವು ಬೆಳೆದು ದೊಡ್ಡದಾಗುತ್ತಿದ್ದಂತೆ ರೈತನಿಗೆ ಅಘಾತ ಕಾದಿತ್ತು.
ಹೌದು, ಕರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಚನ್ನರಾಯಪಟ್ಟಣ ಮೂಲದ ಧರಣೇಶ್ ಎಂಬ ರೈತ, ನಾಟಿ ಕೋಳಿ ಸಾಕಲು ಮುಂದಾಗಿದ್ದರು. ಇದಕ್ಕಾಗಿ ಸರ್ಕಾರದ ಯೋಜನೆಯಡಿ ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕುಕ್ಕುಟ ಉತ್ಪಾದನಾ ಘಟಕದಿಂದ ಸಾವಿರ ನಾಟಿಕೋಳಿ ಮರಿ ತಂದು ಸಾಕಲು ಶುರು ಮಾಡಿದ್ದರು. ಆದರೆ, ಆ ಮರಿಗಳು ಬೆಳೆದ ನಂತರವೇ ಗೊತ್ತಾಗಿದ್ದು, ಇವು ನಾಟಿ ಕೋಳಿಯಲ್ಲ, ಫಾರಂ ಕೋಳಿ, ನಾನು ಮೋಸಹೋಗಿದ್ದೇನೆಂದು.
ರೈತರಿಗೆ ಉಪಕಾರ ಆಗಲಿ ಎಂದೇ ಸರ್ಕಾರ ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಜಾನುವಸರು ಮತ್ತು ಸಾಕಾಣಿಕ ಘಟಕ ತೆರೆದಿದೆ. ಇದರ ಅಡಿಯಲ್ಲಿ ಹಾಸನದ ಜವಾಬ್ದಾರಿಯನ್ನು ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯ ಪ್ರಾಧ್ಯಾಪಕ ಡಾ.ರುದ್ರಪ್ಪ ಅವರು ವಹಿಸಿಕೊಂಡಿದ್ದಾರೆ.
ಡಾ.ರುದ್ರಪ್ಪ, ರೈತರಿಗೆ ನಾಟಿ ಕೋಳಿ ಮರಿಗಳನ್ನು ನೀಡುವಾಗ ನಾಟಿ ಕೋಳಿ ಸಾಕಿದ ರೈತರಿಂದಲೇ ಮೊಟ್ಟೆ ಖರೀದಿ ಮಾಡಿ ಅವುಗಳಿಂದ ಮರಿಮಾಡಿ, ಕೋಳಿ ಸಾಕುವ ರೈತರಿಗೆ ಆ ಮರಿಗಳನ್ನ ಮಾರಾಟ ಆಗುವಂತೆ ಜವಾಬ್ದಾರಿ ವಹಿಸಬೇಕು, ಆದರೆ ರುದ್ರಪ್ಪನವರು ಕುಣಿಗಲ್ ಮೂಲದ ಓರ್ವ ದಲ್ಲಾಳಿಯಿಂದ ಮೊಟ್ಟೆ ಖರೀದಿಗೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ತಾವು ಪಶುವೈದ್ಯ ಡಾಕ್ಟರ್ ಆಗಿ ಮೋಸ ಹೋಗಿದ್ದಲ್ಲದೆ, ಪಾಪ ರೈತನಿಗೂ ಫಾರಂ ಕೋಳಿ ಮರಿ ನೀಡಿ ಆತನೂ ಮೋಸ ಹೋಗುವಂತೆ ಮಾಡಿದ್ದಾರೆ.
ಈಗಾಗಲೇ ಕೋಳಿಮರಿ ಕೊಂಡ ರೈತ ಮರಿಗಾಗಿ 40 ಸಾವಿರ ರೂ. ಹಣ ಹೂಡಿದ್ದು ಇಲ್ಲಿವರೆಗೂ ಒಂದುವರೆ ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾನೆ. ಹೀಗೆ ತಾನು ಮೋಸಹೋಗಿ ನೊಂದು ಕೋಳಿ ಮರಿ ಕೊಂಡ ಹಣ ವಾಪಾಸ್ ಕೇಳಲು ಹೋದಾಗ ಡಾ.ರುದ್ರಪ್ಪ ಅಸಡ್ಡೆ ಮಾತನ್ನಾಡಿ ಕಳಿಸಿದ್ದಾರೆ. ಅಲ್ಲದೆ, ಡಾ. ರುದ್ರಪ್ಪ ಕೂಡ ಈ ನಾಟಿ ಕೋಳಿ ಮರಿ ವಿಚಾರದಲ್ಲಿ ಮೋಸ ಹೋಗಿರುವ ಬಗ್ಗೆ ಪ್ಪಿ ಕೊಂಡಿದ್ದಾರೆ.
ಸರ್ಕಾರದ ನಿಯಮ ಪ್ರಕಾರ ನಾಟಿಕೋಳಿ ಬಿಟ್ಟು ಫಾರಂ ಕೋಳಿ ಅಥವಾ ಬಾಯ್ದರ್ ಕೋಳಿ ಮರಿಗಳನ್ನು ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು ರೈತರಿಗೆ ಮಾರಾಟ ಮಾಡಲು ಅವಕಾಶ ಇಲ್ಲ. ಕೇವಲ ನಾಟಿ ತಳಿ ಅಭಿವೃದ್ಧಿ ಉದ್ದೇಶದಿಂದ ನಾಟಿ ಮರಿ ತಳಿಗಳನ್ನೆ ಪರೀಕ್ಷೆ ಮಾಡಿ ರೈತರಿಗೆ ನೀಡಬೇಕು. ಆದರೆ, ಅಧಿಕಾರಿಗಳ ಬೇಜವಬ್ದಾರಿತನ ಮತ್ತು ಹಣದಾಸೆಗೆ ರೈತನಿಗೆ ಕಾಗೆ ಗೂಡಲಿ ಕೋಗಿಲೆ ಬೆಳೆಸಿದಂತಾಗಿದೆ.
Home Hassan Taluks Hassan ಸರ್ಕಾರ ಯೋಜನೆಯಡಿ ಕೋಳಿಮರಿಗಳನ್ನು ತಂದ ರೈತ: ಮರಿಗಳು ದೊಡ್ಡದಾಗುತ್ತಿದ್ದಂತೆ ಕಾದಿತ್ತು ಶಾಕ್!