ನೊಂದ, ಶೋಷಣೆಗೆ ಒಳಗಾದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಇಲ್ಲದ ಮಹಿಳೆಯರಿಗೆ ಆಶ್ರಯ ನೀಡುತ್ತಿರುವ ಸ್ವಾಧಾರ ಗೃಹ ಯೋಜನೆಯಡಿ ನೊಂದವರಿಗೆ ಆಶ್ರಯ ನೀಡಿ ಉತ್ತಮ ಗುಣಮಟ್ಟದ ಸೌಲಭ್ಯ ಒದಗಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ರೂಪಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವಾಧಾರ ಗೃಹ ಯೋಜನೆ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಫಲಾನುಭವಿಗಳ ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿ ಮತ್ತು ಕಟ್ಟಡ ನಿರ್ವಹಣೆಗಾಗಿ ಅಗತ್ಯವಿರುವ ಅನುದಾನವನ್ನು ಸ್ವಯಂ ಸೇವಾ ಸಂಸ್ಥೆಗೆ ಕೂಡಲೇ ಬಿಡುಗಡೆ ಮಾಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
18 ವರ್ಷ ಮೇಲ್ಪಟ್ಟ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವುದು, ದೌರ್ಜನ್ಯಕ್ಕೊಳಗಾದ ಮಹಿಳೆಯರ ಜೀವನಕ್ಕೆ ಆಶ್ರಯ ಮತ್ತು ಪುನರ್ವಸತಿ ಕಲ್ಪಿಸುವುದು, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಸುವುದು ಹಾಗೂ ಆಶ್ರಯ, ಆಹಾರ, ಶಿಕ್ಷಣ ವಸತಿ, ವೃತ್ತಿ ತರಭೇತಿ, ಸಮಾಲೋಚನೆ, ವೈದ್ಯಕೀಯ ಸೌಲಭ್ಯ, ಕುಟುಂಬಕ್ಕೆ ಪುನರ್ ಮಿಲನ ಮತ್ತು ಉಚಿತ ಕಾನೂನಿನ ನೆರವನ್ನು ಒದಗಿಸುತ್ತಿದ್ದು ನಿರಾಶ್ರಿತ ಮಹಿಳೆಯರಿಗೆ ಅನುಕೂಲಕರವಾಗಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಹಾಘೂ ಇನ್ನಷ್ಟು ನೊಂದ ಮಹಿಳೆಯರು ಹಾಗೂ ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧೀಕಾರಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ.ಜಿ ದಿಲೀಪ್ ಅವರು ಮಾತನಾಡಿ ಸದರಿ ಯೋಜನೆಯಲ್ಲಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಮಿತಿಗಿಂತಲೂ ಹೆಚ್ಚಾಗಿದ್ದು, ಹೆಚ್ಚುವರಿ ಕಟ್ಟಡದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ನಿರ್ದೇಶನಾಲಯಕ್ಕೆ ಹೆಚ್ಚುವರಿ ಅನುದಾನಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಬಸವರಾಜ್, ಡಿ.ವೈ.ಎಸ್.ಪಿ ಪುಟ್ಟಸ್ವಾಮಿ,ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕರಾದ ನೀಲಕಂಠಪ್ಪ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.