ಹಾಸನ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಎಲ್ಲಾ ಕೆರೆಗಳನ್ನು ತಾತ್ಕಾಲಿಕವಾಗಿ ದುರಸ್ಥಿ ಪಡಿಸಲು ಕ್ರಮವಹಿಸುವಂತೆ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಸಣ್ಣ ನೀರಾವರಿ ಕೆರೆಗಳ ಪುನರುಜ್ಜೀವನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಮಳೆಯಿಂದ ಹಾನಿಯಾಗಿರುವ ಕೆರೆಗಳನ್ನು ದುರಸ್ಥಿಪಡಿಸುವಲ್ಲಿ ಬಾಕಿ ಉಳಿದಿರುವ ಕೆರೆಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಕೆರೆಗಳ ಯತಾಸ್ಥಿತಿಯಲ್ಲಿ ಕಾಪಡುವಂತೆ ಅವರು ತಿಳಿಸಿದರು.

ಜಿಲ್ಲೆಯಲ್ಲಿನ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಕೆರೆಯನ್ನು ಆಯ್ಕೆ ಮಾಡಿ ಪ್ರೇಕ್ಷಣೀಯ ಹಾಗೂ ಪ್ರವಾಸಿ ತಾಣದಂತೆ ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ, ಸಿದ್ದಪಡಿಸುವಂತೆ ಜೆ.ಸಿ. ಮಾಧುಸ್ವಾಮಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಹೆಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್ ಅವರು ಮಾತನಾಡಿ ಕೆರೆಗಳ ಏರಿ ಮತ್ತು ಹೆದ್ದಾರಿ ಪಕ್ಕದಲ್ಲಿರುವ ಕೆರೆಯಲ್ಲಿ ಜಾಲಿಮರಗಳು ಹೆಚ್ಚಾಗಿದ್ದು, ಅವುಗಳನ್ನು ತೆರೆವುಗೊಳಿಸಲು ಅಧಿಕಾರಿಗಳಿಗೆ ಆದೇಶಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕೆರೆಗಳ ಏರಿ ಮತ್ತು ಹೆದ್ದಾರಿ ಪಕ್ಕದಲ್ಲಿರುವ ಕೆರೆಯಲ್ಲಿ ಜಾಲಿಮರಗಳನ್ನು ತೆರವುಗೊಳಿಸಲು ಹಾಗೂ ಕೆರೆಗಳ ಸ್ವಚ್ಚತೆಗೆ ಕ್ರಮ ಕೈಗೊಳ್ಳುವಂತೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮಥತ್ತುಂಜಯ ಸ್ವಾಮಿ, ಸೂಪರ್ಡೆಂಟ್ ಇಂಜಿನಿಯರ್ ರಾಜ್ಶೇಖರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.