ಕೋವಿಡ್ – 19 ಸೋಂಕಿನಿಂದ ಇಡಿ ದೇಶವೇ ತತ್ತರಿಸಿದ್ದು ಜನಜೀವನ ವ್ಯವಸ್ಥೆಯು ಸಂಕಷ್ಟಕ್ಕೆ ಸಿಲುಕಿದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರವು ಅವಶ್ಯಕವಾಗಿದೆ ಎಂದು ಹಾಸನದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ರವಿಕಾಂತರವರು ತಿಳಿಸಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲಗೌಡ ರವರು ರಾಜ್ಯ ಕಾನೂನು ಸೇವೆಗಳ ಕೋವಿಡ್ – 19 ನಿರ್ವಹಣಾ ಸಮಿತಿಯ ಮೂಲಕ ನೀಡಲಾದ ನಿರ್ದೇಶನದನ್ವಯ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಕೋವಿಡ್ – 19 ಆಸ್ಪತ್ರೆಗೆ ಭೇಟಿ ಮಾಡಿ ಕೋವಿಡ್ – 19 ನಿಯಂತ್ರಣಕ್ಕಾಗಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು ಮತ್ತು ಕೋವಿಡ್ ವಾರ್ ರೂಮ್ ಗೆ ಭೇಟಿ ಮಾಡಿ ಸ್ಥಾನಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿಯನ್ನು ಪಡೆದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಕೃಷ್ಣಮೂರ್ತಿಯವರೊಂದಿಗೆ ಮಾತನಾಡಿ ಕೋವಿಡ್ ನಿಯಂತ್ರಣಕ್ಕಾಗಿ ಮಾಡಲಾಗಿರುವ ಹಾಸಿಗೆಗಳ ಸಂಖ್ಯೆ, ವೆಂಟಿಲೇಟರ್ ಗಳನ್ನೊಳಗೊಂಡ ಹಾಸಿಗೆಗಳ ಸಂಖ್ಯೆ, ಆಮ್ಲಜನಕದ ಸರಬರಾಜು, ಸಿಬ್ಬಂದಿಗಳ ವೃತ್ತಿಪರತೆ ಹಾಗು ಕೈಗೊಂಡಿರುವ ಸುರಕ್ಷತಾ ವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಕೋವಿಡ್ – 19 ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ನಿರಂತರವಾಗಿ ಹರಸಾಹಸ ಮಾಡುತ್ತಿದ್ದು ಹಲವಾರು ವೈದ್ಯರು, ಸಿಬ್ಬಂದಿಗಳು ಈ ಸಂಬಂಧವಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ ಇದರ ಬಗ್ಗೆ ಜನಸಾಮಾನ್ಯರು ಅರಿವನ್ನು ಹೊಂದದೆ ಇದಕ್ಕು ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳು ಜನಸಾಮಾನ್ಯರ ಪರವಾಗಿ ಅವರಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ, ಆದೇಶಗಳನ್ನು ನೀಡುತ್ತಿವೆ ಇದನ್ನು ಜನರು ಅರಿತು ಕೋವಿಡ್ – 19 ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಅವರು ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ 600 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದ್ದು , ವೆಂಟಿಲೇಟರ್ ವ್ಯವಸ್ಥೆ ತುರ್ತು ನಿಗಾ ಘಟಕಗಳನ್ನು ತೆರೆಯಲಾಗಿದೆ. ಸದ್ಯದಲ್ಲಿ ಆಮ್ಲಜನಕಕ್ಕೆ ಕೊರತೆಯಿಲ್ಲ ಆದರೆ ನಿರಂತರವಾಗಿ ಹೆಚ್ಚಳವಾಗುತ್ತಿರುವ ಸೋಂಕಿನಲ್ಲಿ ಇಳಿಕೆ ಕಂಡು ಬರದಿದ್ದರೆ ಕೊರತೆಯಾಗಬಹುದು ಈ ವಿಷಯದಲ್ಲಿ ಜಿಲ್ಲಾಡಳಿತವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದು ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಿದ್ದು ಮಲ್ನಾಡ್ ಆಕ್ಸಿಜನ್ ಪ್ಲಾಂಟ್ ನಿಂದ ಆಮ್ಲಜನಕವನ್ನು ಪಡೆದು ಸರಬರಾಜು ಮಾಡುತ್ತಿದೆ ಎಂದು ವಿವರ ಒದಗಿಸಿದರು.
ಕೋವಿಡ್ ಸೋಂಕಿತರೊಂದಿಗೆ ಯಾವುದೇ ವ್ಯಕ್ತಿಗಳನ್ನು ಒಳ ಬಿಡದಂತೆ ಆದೇಶವಿದ್ದರು ಸೋಂಕಿತರ ಪರಿವಾರದವರು ಜಗಳ ಮಾಡುವುದು ವಾದಕ್ಕಿಳಿಯುವುದು ಸಾಮಾನ್ಯವಾಗಿದ್ದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ರಕ್ಷಣೆಯಿಲ್ಲದೆ ಭಯದಲ್ಲಿಯೇ ಕೆಲಸ ನಿರ್ವಹಿಸಬೇಕಾಗಿದೆ. ಇದರ ಸಂಬಂಧವಾಗಿ ಜನರಿಗೆ ಅರಿವು ಅಗತ್ಯವಿದೆ ಎಂದರು. ಕೋವಿಡ್ ಹೆಚ್ಚಳದ ಸರಪಳಿಯನ್ನು ಕಟ್ಟುನಿಟ್ಟಿನ ಲಾಕ್ ಡೌನ್ ನಿಂದ ಮಾತ್ರವೇ ನಿಯಂತ್ರಿಸಲು ಸಾಧ್ಯ ಅದನ್ನು ಬಿಟ್ಟು ಬೇರೆ ಸೂಕ್ತ ಪರಿಹಾರವಿಲ್ಲ ಎಂದು ಅಭಿಪ್ರಾಯಪಟ್ಟರು.
ವಾರ್ಡ್ ಗಳಲ್ಲಿ ಸೋಂಕಿತರ ಪರಿವಾರದವರು ಸುರಕ್ಷತ ನಿಯಮ ಪಾಲನೆ ಮಾಡದೆ ಇರುವುದು ಅದೇ ಹಾಸಿಗೆ ಮೇಲೆ ಕುರುವುದು , ಜೊತೆಯಾಗಿ ಮಲಗುವುದು,ಹರಿವು ಮೂಡಿಸಲು ಹೋದ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ವಾಗ್ವದಕಿಳಿಯುವುದು ಮಾಸ್ಕ್ ತೆಗೆದು ಆಮ್ಲಜನಕ ಪೋಲು ಮಾಡುವುದನ್ನು ಅಧಿಕಾರಿಗಳು ಸಿ.ಸಿ ಟಿವಿ ಮೂಲಕ ನ್ಯಾಯದೀಶರಿಗೆ ತೋರಿಸಿದರು.
ಸೋಂಕಿತರು ಹಾಗೂ ಪರಿವಾರದವರು ನಡೆದುಕೊಳ್ಳುವ ರೀತಿಗೆ ಬೇಸರ ವ್ಯಕ್ತಪಡಿಸಿದ ನ್ಯಾಯಾಧೀಶರು ಜನರು ಅರಿವು ಮೂಡಿಸಿಕೊಂಡು ಜಾಗೃತರಾಗದಿದ್ದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಪ್ರತಿಯೊಂದು ವಿಷಯಕ್ಕೂ ಸರ್ಕಾರ , ವ್ಯವಸ್ಥೆಗಳನ್ನು ದೂರದೇ ಪ್ರತಿಯೊಬ್ಬರು ವ್ಯಾಧಿ ಸಮಯದಲ್ಲಿ ಮನೆಯಲ್ಲೇ ಇದ್ದು ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಸಮಾಜವನ್ನು ಕೋವಿಡ್ ಸೋಂಕಿನಿಂದ ಪಾರು ಮಾಡಬೇಕಿದೆ ಈ ಗುರುತರ ಜವಾಬ್ದಾರಿ ಭಾರತೀಯ ಪ್ರಜೆಗಳಾದ ನಮ್ಮೆಲ್ಲರ ಮೇಲಿದೆ ಎಂದರು.