ಹಾಸನ: ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆಸುವ ಕುರಿತು ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಜೂನ್ 7ರ ಬಳಿಕತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 7 ಬಳಿಕವೂ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಕೇಂದ್ರ ಮತ್ತು ರಾಜ್ಯದಿಂದ ಏನೇ ಮಾರ್ಗಸೂಚಿ ಹೊರಡಿಸಿದರೂ ಅದನ್ನು ಪಾಲಿಸಲಾಗುವುದು. ಜತೆಗೆ ಆಯಾ ಜಿಲ್ಲೆಯ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಿರುವುದರಿಂದ ಅ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವಿಟಿ ದರ ಶೇ. 45ರಷ್ಟಿತ್ತು. ಮೂರು ದಿನಗಳಿಂದ ಸಾರಾಸರಿ ಪಾಸಿಟಿವಿಟಿ ದರ ಶೇ. 35ಕ್ಕೆ ಇಳಿಕೆಯಾಗಿದೆ. ಇನ್ನು ಒಂದು ವಾರದಲ್ಲಿ ಶೇ. 12ರಷ್ಟಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಶಾಸಕರ ಒತ್ತಾಯದಂತೆ ಹೋಂ ಐಸೋಲೇಷನ್ ತೆಗೆದು ಪ್ರತಿಯೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಉಪಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲೆಯಲ್ಲಿ ಸಿಸಿ ಕೇಂದ್ರಗಳನ್ನು ತರೆಯಲಾಗಿದೆ. ಪೊಲೀಸರ ಸಹಕಾರ ಪಡೆದು ಸಿಬ್ಬಂದಿ ಸೋಂಕಿತ ವ್ಯಕ್ತಿಯನ್ನು ಸಿಸಿ ಕೇಂದ್ರಕ್ಕೆ ತಂದು ಬಿಡುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನೆನ್ನೆವರೆಗೆ 2796 ಮಂದಿಯನ್ನು ಕರೆತರಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 8 ರಿಂದ 10 ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಮತ್ತಷ್ಟು ಹತೋಟಿಗೆ ಬರಲಿದೆ. ಈಗಾಗಲೇ ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, 50 ವಾಹನಗಳನ್ನು ಒದಗಿಸಲಾಗಿದೆ. ಯಾವ ತಾಲ್ಲೂಕಿಗೆ ಹೆಚ್ಚಿನ ವಾಹನಗಳು ಬೇಕು ಎಂದು ಶಾಸಕರು ತಿಳಿಸಿದರೆ ಒದಗಿಸಲಾಗುವುದು ಎಂದರು.
ಸಕಲೇಶಪುರ, ಬೇಲೂರು ಮತ್ತು ಅರಸೀಕೆರೆ ತಾಲ್ಲೂಕಿನಲ್ಲಿ ಈಗಾಗಲೇ ಆಮ್ಲಜನಕ ಘಟಕದ ಕಾಮಗಾರಿ ಪ್ರಾರಂಭವಾಗಿದೆ. ಅದೇ ರೀತಿ ಎಲ್ಲಾ ತಾಲ್ಲೂಕುಗಳಲ್ಲೂ ಆಮ್ಲಜನಕ ಘಟಕ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಕೋವಿಡ್ ಮೂರನೇ ಅಲೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಕೋವಿಡ್ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಂ.ಶಿವಲಿAಗೇಗೌಡ, ಸಿ.ಎನ್. ಬಾಲಕೃಷ್ಣ, ಕೆ.ಎಸ್. ಲಿಂಗೇಶ್ ಇದ್ದರು.
63 ವೈದ್ಯರ ನೇಮಕ:
ಜಿಲ್ಲೆಯಲ್ಲಿ ಅನೇಕ ದಿನಗಳಿಂದ ವೈದ್ಯರ ಕೊರತೆ ಇದೆ. ಕೂಡಲೇ ನೇಮಕ ಮಾಡುವಂತೆ ಶಾಸಕರು ಒತ್ತಡ ಹೇರಿದ್ದರು. ಕೆಲವು ದಿನಗಳ ಹಿಂದೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಗೆ ಬಂದಿದ್ದಾಗ ವೈದ್ಯರನ್ನು ನೇಮಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಜಿಲ್ಲೆಗೆ 63 ವೈದ್ಯರನ್ನು ನೇಮಕ ಮಾಡಲಾಗಿದೆ. ಇನ್ನು ಕೆಲವು ವೆಂಟಿಲೇಟರ್ ಆಪರೇಟರ್‌ಗಳನ್ನು ಸದ್ಯದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.