ಬಯಲು ಸೀಮೆಗೆ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಎತ್ತಿನಹಳ್ಳ ಯೋಜನೆ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಲ ಸಂಪನ್ಮೂಲ ಹಾಗೂ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಸೂಚಿಸಿದ್ದಾರೆ.
ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ಬಳಿಯ ಎತ್ತಿನ ಹೊಳೆ ಮೊದಲ ಹಂತದ ನೀರೆತ್ತುವ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ನಿಯಮಾನುಸಾರ ಅನುಮತಿ ಪಡೆಯಲು ವಿಳಂಬವಾಗಿದೆ ಈ ಸಮಸ್ಯೆ ತ್ವರಿತವಾಗಿ ಬಗೆಹರಿಸಬೇಕಿದೆ ಎಂದರು.
ಕೆಲವು ಜಮೀನಿನ ಮಾಲೀಕರು ಮಾತ್ರ ಕೋರ್ಟ್‍ಗೆ ಹೋಗಿದ್ದು, ಅಂತಹವರಿಗೆ ಪರಿಹಾರ ಹಣವನ್ನು ನ್ಯಾಯಾಲಯಕ್ಕೆ ಜಮೆ ಮಾಡಿ ತ್ವರಿತಗತಿಯಲ್ಲಿ ಜಮೀನು ಬಿಡಿಸಿಕೊಡಲು ಸೂಚಿಸಲಾಗಿದೆ ಪರಿಹಾರ ನೀಡಲು ಸಾಕಷ್ಟು ಹಣ ಲಭ್ಯವಿದೆ ಎಂದು ತಿಳಿಸಿದರು.
ಕೆಲವು ಪ್ರದೇಶದ ರೈತರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಆ ಸ್ಥಳಗಳಲ್ಲಿ ಮಾತ್ರ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಯೋಜನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಸಹ ಪೂರ್ಣಗೊಂಡಿದ್ದು. ಮುಂದಿನ ಒಂದೆರೆಡು ತಿಂಗಳಿನಲ್ಲಿ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆಯಲ್ಲಿ ಶಾಸಕರಾದ ಕೆ.ಎಂ ಶಿವಲಿಂಗೇಗೌಡ ,ಕೆ.ಎಸ್ ಲಿಂಗೇಶ್ ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ಹಾಗೂ ಎತ್ತಿನ ಹೊಳೆ ಯೋಜನೆ ಅಧಿಕಾರಿಗಳು ಹಾಜರಿದ್ದರು.