ರೈತರ ಖಾತೆಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವಂತೆ ಸೂಚನೆ

0

ಸರ್ಕಾರದಿಂದ ಎತ್ತಿನಹೊಳೆ ಯೋಜನೆ ಭೂ ಸ್ವಾಧೀನಕ್ಕಾಗಿ ಬಿಡುಗಡೆಯಾಗಿರುವ ಹಣವನ್ನು ತ್ವರಿತವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುವಂತೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ರೈತರ ಜಮೀನಿನ ನೇರ ಖರೀದಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವಾಗಿ ಖರೀದಿ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.

ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅವಾರ್ಡ್ ಪಾಸಾದÀ ತಕ್ಷಣ ಹಣವನ್ನು ಕೋರ್ಟ್‍ನಲ್ಲಿ ಠೇವಣಿ ಮಾಡಬೇಕು ಇದರಿಂದ ಜಮೀನನ್ನು ಪಡೆದು ಕೆಲಸ ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.

ಭೂಸ್ವಾಧೀನ ವಿಳಂಬವಾದರೆ ಅದಕ್ಕೆ ಕಂದಾಯ ಮತ್ತು ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್, ಸೂಪರಿಡೆಂಟ್ ಇಂಜಿನಿಯರ್ ಹಾಗೂ ಕಾರ್ಯಪಾಲಕ ಅಭಿಯಂತರರು ನೇರ ಹೊಣೆಗಾರರಾಗಲಿದ್ದಾರೆ ಎಂದು ತಿಳಿಸಿದರು.

ಎತ್ತಿನ ಹೊಳೆ ಕಾರ್ಯ ಪೂರ್ಣವಾಗುವವರೆಗೆ ಪ್ರತಿ ಹಂತದಲ್ಲಿಯೂ ಪತ್ರ ವ್ಯವಹಾರ ನಡೆಸಬೇಕು ಎಂದ ಅವರು ಜಮೀನುಗಳು ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಅಭಿವೃದ್ದಿ ಯೋಜನೆಗೆ ಪಡೆದುಕೊಂಡಿರುವ ಭೂಮಿಯನ್ನು ರೈತರ ಖಾತೆಯಿಂದ ಕಡಿತಗೊಳಿಸಿ ಆರ್.ಟಿ.ಸಿ ಯಲ್ಲಿ ಬದಲಾವಣೆಗೆ ಸಂಬಂಧಪಟ್ಟ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ನೀರಾವರಿ ಯೋಜನೆಗಳಿಂದ ದೇಶದ ಶ್ರೀಮಂತಿಕೆ ಹೆಚ್ಚಾಗುವುದರ ಜೊತೆಗೆ ರೈತರ ಬದುಕು ಹಸನಾಗುತ್ತದೆ ಎಂದು ಅವರು ಹೇಳಿದರು.

ಈಗಾಗಲೇ ಶೇ 80 ರಿಂದ 90 ರಷ್ಟು ಕೆಲಸವಾಗಿರುವ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವಾರ್ಡ್ ಪಾಸಾದ ತಕ್ಷಣ ರೈತರಿಗೆ ನೊಟೀಸ್ ನೀಡಿ ಹಣ ಪಾವತಿಗೆ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಪ್ರೀತಂ ಜೆ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ನೀರಾವರಿ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್‍ರಾವ್ ಪೇಶ್ವೆ, ನೀರಾವರಿ ಇಲಾಖೆ ಮುಖ್ಯ ಅಭಿಯಂತರರಾದ ಮಾದವ, ವಿಶೇಷ ಭೂ ಸ್ವಾಧೀನಾಧಿಕಾರಿ ಕಲ್ಪಶ್ರಿ, ಎತ್ತಿನ ಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರರಾದ ಆನಂದ್ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here